ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣ: ನಟ ಚೇತನ್ ಗೆ ಜಾಮೀನು
ಬೆಂಗಳೂರು: ನ್ಯಾಯಾಧೀಶರ ನಿಲುವಿನ ಕುರಿತು ಟೀಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ.
ನ್ಯಾಯಾಧೀಶರ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಚೇತನ್ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ಜಾಮೀನು ಕೋರಿ ನಟ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನಗರದ 8ನೆ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಆರೋಪಿಯು 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಆರೋಪಿ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು. ಕೋಮು ಸೌಹಾರ್ದತೆ ಕದಡುವ ಅಥವಾ ಸಮಾಜದ ಶಾಂತಿ ಕೆಡಿಸುವಂತಹ ಪೋಸ್ಟ್ ಗಳನ್ನು ಹಾಕಬಾರದು. ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಬಾರದು. ತನಿಖಾಧಿಕಾರಿಯ ತನಿಖೆಗೆ ಸಹಕಾರ ನೀಡಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ವಿಳಾಸ ಹಾಗೂ ಗುರುತಿನ ಚೀಟಿಗಳನ್ನು ಖಾತ್ರಿಪಡಿಸಬೇಕು. ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.