ನಂಜನಗೂಡು: ಆಟ ಆಡುವಾಗ ಐಸ್ ಕ್ರೀಂ ಬಾಕ್ಸ್ ನಲ್ಲಿ ಕುಳಿತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಮೃತ್ಯು
ಮನೆ ಮುಂದೆ ಇಟ್ಟಿದ್ದ ಐಸ್ ಕ್ರೀಂ ಬಾಕ್ಸ್
ನಂಜನಗೂಡು: ಮನೆ ಮುಂದೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರು ಐಸ್ ಕ್ರೀಂ ಬಾಕ್ಸ್ ಒಳಗೆ ಅವಿತುಕೊಂಡ ಪರಿಣಾಮ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ಮಸಗೆ ಗ್ರಾಮದ ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12) ಮತ್ತು ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಪಟ್ಟ ಬಾಲಕೀಯರು.
ಕಣ್ಣಾ ಮುಚ್ಚಾಲೆ ಆಟ ಆಡುವಾಗ ಮಕ್ಕಳು ಅವಿತು ಕೊಳ್ಳಲು ಮನೆಯ ಮುಂದೆ ಇಟ್ಟಿದ್ದ ಖಾಲಿ ಐಸ್ ಕ್ರೀಂ ಬಾಕ್ಸ್ ಒಳಗೆ ಹೋಗಿ ಅವಿತುಕೊಂಡಿದ್ದಾರೆ. ಇವರ ಅಲುಗಾಟಕ್ಕೆ ಐಸ್ ಕ್ರೀಮ್ ಬಾಕ್ಸ್ ನ ಬಾಗಿಲು ಮುಚ್ಚಿ ಕೊಂಡು ಮೇಲೆ ಲಾಕ್ ಆಗಿದೆ. ಮಕ್ಕಳು ಇದರಿಂದ ಹೊರಬರಲು ಸಾಕಷ್ಟು ಪ್ರಯತ್ನಪಟ್ಟು ಕೂಗಾಡಿದರೂ ಯಾರಿಗೂ ಕೇಳಿಲ್ಲ, ಇದರಿಂದ ಐಸ್ ಕ್ರೀಂ ಬಾಕ್ಸ್ ಒಳಗಡೆಯೇ ಉಸಿರುಗಟ್ಟಿ ಒದ್ದಾಡಿ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆಟವಾಡುತ್ತಿದ್ದ ಬಾಲಕಿಯರು ಸುಮಾರು ಸಮಯ ವಾದರೂ ಹೊರಬರದ ಕಾರಣ ಬಾಕ್ಸನ ಬಾಗಿಲು ತೆರೆದು ನೋಡಿದಾಗ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಇಬ್ಬರು ಹೆಣ್ಣು ಮಕ್ಕಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಕಣ್ಣೀರು ಹಾಕಿದ್ದಾರೆ. ಮಸಗೆ ಗ್ರಾಮದಲ್ಲಿ ಮೃತ ಮಕ್ಕಳ ಸಂಬಂಧಿಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.