ಅಶ್ವತ್ಥ್ ನಾರಾಯಣ ಭೇಟಿಯಾಗಿಲ್ಲ, ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ: ಎಂ.ಬಿ. ಪಾಟೀಲ್
ಬೆಂಗಳೂರು: 'ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಇತ್ತೀಚೆಗೆ ಭೇಟಿ ಮಾಡಿಲ್ಲ' ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, 'ಅಶ್ವತ್ಥ್ ನಾರಾಯಣ್ ಅವರ ಮಗಳು ಮತ್ತು ನನ್ನಮಗ ಸ್ನೇಹಿತರು. ಹಾಗಾಗಿ ಭೇಟಿ ಸ್ವಾಭಾವಿಕ. ಅಶ್ವತ್ಥ್ ನಾರಾಯಣ್ ಅವರನ್ನು ನಾನು ಭೇಟಿ ಮಾಡಲ್ಲ ಅಂತ ಏನೂ ಇಲ್ಲ. ಆದರೆ ಇತ್ತೀಚೆಗೆ ಅವರನ್ನು ನಾನು ಭೇಟಿ ಮಾಡಿಲ್ಲ. ರಕ್ಷಣೆಗಾಗಿ ಅಶ್ವತ್ಥ್ ನಾರಾಯಣ ಅವರನ್ನು ಭೇಟಿಯಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ' ಎಂದು ತಿಳಿಸಿದರು.
ಸಚಿವ ಅಶ್ವತ್ಥ್ ನಾರಾಯಣ್ ಅವರು 'ಅಕ್ರಮ ಪ್ರಕರಣದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಎಂ.ಬಿ ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಪಾರ್ಟಿಯವರು ಧ್ವನಿ ಎತ್ತಬಾರದು ಅಂತ ಹೇಳಿ ಮನವೊಲಿಸುವುದಕ್ಕಾಗಿ ಭೇಟಿಯಾಗಿದ್ದಾರೆ' ಎಂದು ಮಂಗಳವಾರ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವತ್ಥ್ ನಾರಾಯಣ್ 'ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ನಾನು ಭೇಟಿ ಆಗಿಲ್ಲ. ಅದರ ಅಗತ್ಯವೂ ಇಲ್ಲ' ಎಂದು ಹೇಳಿದ್ದಾರೆ.