''ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ": ಬಿಜೆಪಿ ಮಾಜಿ ಶಾಸಕರ ಮನವಿ
ವಿ.ಎಸ್.ಪಾಟೀಲ್- ಬಿಜೆಪಿ ಮಾಜಿ ಶಾಸಕ
ಬೆಂಗಳೂರು, ಜುಲೈ.05: ಮಗನ ನಡೆಯಿಂದ ಬೇಸತ್ತ ಮಾಜಿ ಶಾಸಕರೊಬ್ಬರು ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
'ದಯವಿಟ್ಟು ಯಾರೂ ನನ್ನ ಮಗನಿಗೆ ಸಾಲ ಕೊಡಬೇಡಿ' ಎಂದು ಯಲ್ಲಾಪುರ ಮತ ಕ್ಷೇತ್ರದ ಬಿಜೆಪಿ ಮಾಜಿ ಶಾಸಕರೂ ಆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಮಾಧ್ಯಮಗಳಿಗೆ ಪ್ರಕಟನೆ ಹೊರಡಿಸಿದ್ದಾರೆ.
'ನನ್ನ ಮಗ ಬಾಪುಗೌಡ ಪಾಟೀಲನಿಗೆ ಯಾರೂ ಸಾಲ ಕೊಡಬೇಡಿ. ದುಶ್ಚಟಕ್ಕೆ ಬಲಿಯಾಗಿ ತನ್ನ ಎಲ್ಲ ಆಸ್ತಿಯನ್ನೂ ಹಾಳು ಮಾಡಿಕೊಂಡಿದ್ದಾನೆ. ಅವನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಮುಂಗಡ ಚೆಕ್ ಕೊಟ್ಟು ಸಾಲ ತೆಗೆದುಕೊಳ್ಳುತ್ತಿರುವುದು ನಿರಂತರ ನಡೆಯುವ ಪ್ರಕ್ರಿಯೆಯಾಗಿದೆ. ನನ್ನ ಹೆಸರನ್ನು ಹೇಳಿ ಸಾರ್ವಜನಿಕರಿಗೆ ಸುಳ್ಳು ಭರವಸೆ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದಾನೆ' ಎಂದು NWKSRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಲೆಟರ್ಹೆಡ್ ಮೂಲಕವೇ ಮನವಿ ಮಾಡಿದ್ದಾರೆ.
'ಪದವೀಧರನಾದ ನನ್ನ ಮಗ, ಐದಾರು ವರ್ಷಗಳಿಂದ ದುಶ್ಚಟಕ್ಕೆ ಬಿದ್ದಿದ್ದಾನೆ. ಕೋಟಿಗಟ್ಟಲೇ ಸಾಲ ಮಾಡಿ, ಸಾಲ ತೀರಿಸಲು ಅವನ ಹೆಸರಿನಲ್ಲಿದ್ದ ಆಸ್ತಿಯನ್ನೂ ಮಾರಿದ್ದಾನೆ, ಅವನ ಮಾನಸಿಕ ಸ್ಥಿತಿ ಸರಿ ಇಲ್ಲ. ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಸುಳ್ಳು ಹೇಳಿ ಸಾಲ ಪಡೆಯುತ್ತಿದ್ದಾನೆ. ದಯವಿಟ್ಟು ಸಾರ್ವಜನಿಕರು ನನ್ನ ಮಗನ ಮಾತಿಗೆ ಮರುಳಾಗಿ ಸಾಲ ಕೊಡಬಾರದು. ಮೋಸ ಹೋಗಬಾರದು' ಎಂದು ವಿ.ಎಸ್.ಪಾಟೀಲ್ ಮಾಧ್ಯಮಗಳಿಗೆ ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.