-

ಕಸಾಪ ನಿಬಂಧನೆಗಳ ತಿದ್ದುಪಡಿ: ಸರಕಾರದ ಅಂಗೀಕಾರ

-

ಬೆಂಗಳೂರು, ಜು.6: ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಆಮೂಲಾಗ್ರ ಹಾಗೂ ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ “ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತ”ನ್ನಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ನಿಬಂಧನೆಗಳ ತಿದ್ದುಪಡಿಯನ್ನು ಸಹಕಾರ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯವರು ಅಂಗೀಕರಿಸಿ ನೋಂದಾಯಿಸಿದ್ದಾರೆ. 

ಈ ಅನುಮೋದನೆಯನ್ನು ಬೆಂಗಳೂರು ಮಹಾನಗರ ಸಿಟಿ ಸೇಷನ್ಸ್ ನ್ಯಾಯಾಲಯದ ಮೂಲದಾವೆ ಸಂಖ್ಯೆ ಓಎಸ್-3029/2022ರಲ್ಲಿ ನೀಡಿರುವ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಶತಮಾನಕ್ಕೂ ಹೆಚ್ಚು ಕಾಲದಿಂದ ಜನಪರ ಹಾಗೂ ಕನ್ನಡದ ಕಾರ್ಯಗಳನ್ನು ಮಾಡುತ್ತ ಬಂದಿರುವ ಕಸಾಪದ ನಿಬಂಧನೆಗಳಿಗೆ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಇದುವರೆಗೆ 6 ಬಾರಿ ತಿದ್ದುಪಡಿ ಮಾಡಲಾಗಿತ್ತು. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ, ಚುನಾವಣೆಯ ಪ್ರಚಾರದ ಪ್ರಣಾಳಿಕೆಯಲ್ಲಿ ಸದಸ್ಯರಿಗೆ ನೀಡಿದ ಭರವಸೆಯಂತೆ “ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತ”ನ್ನಾಗಿಸುವ ಹಿನ್ನೆಲೆಯಲ್ಲಿ ಪರಿಷತ್ತಿನ ನಿಬಂಧನೆಗಳಿಗೆ ಆಮೂಲಾಗ್ರ ಬದಲಾವಣೆ ಮಾಡಿದ್ದೇವೆ ಎಂದರು.

ಪ್ರಸ್ತುತ ಕಾಲಘಟ್ಟಕ್ಕೆ ಪರಿಷತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕೆ ಕಾನೂನು ಚೌಕಟ್ಟಿನಲ್ಲಿ ನಿಬಂಧನೆಗಳನ್ನು ಬದಲಾವಣೆ ಮಾಡುವುದಕ್ಕೆ 2021ರ ಡಿ.4ರಂದು ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂವಿಧಾನ ಹಾಗೂ ಸಂಬಂಧಿತ ಕಾನೂನುಗಳ ಚೌಕಟ್ಟಿನಲ್ಲಿ ಯಾವ ರೀತಿ ತಿದ್ದುಪಡಿ ತರಬೇಕು ಎಂಬ ಬಗ್ಗೆ ಸಲಹೆ-ಸೂಚನೆಯ ಮೇರೆಗೆ ಹೈಕೋರ್ಟ್ ನಿವೃತ್ತ ನ್ಯಾ.ಅರಳಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ 11 ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು.

ಸಮಿತಿಯ ಸದಸ್ಯರುಗಳಾಗಿ ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಶಿವಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಚುನಾವಣಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿ, ಕೇಂದ್ರ ವಿಶೇಷ ಚುನಾವಣಾಧಿಕಾರಿ ಎಸ್.ಟಿ. ಮೋಹನ್ರಾಜು, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅಶ್ವತ್ಥಯ್ಯ, ಮಂಡ್ಯ ಜಿಲ್ಲಾ ಮಾಜಿ ಕಸಾಪ ಅಧ್ಯಕ ಡಾ. ಎಚ್.ಎಸ್. ಮುದ್ದೇಗೌಡ ಹಾಗೂ ಕಸಾಪ ಗ್ರಂಥ ಭಂಡಾರ ಸಲಹಾ ಸಮಿತಿಯ ಮಾಜಿ ಸದಸ್ಯ ಪಂಪಯ್ಯ ಸ್ವಾಮಿ ಸಾಲಿಮಠ, ಹಿರಿಯ ವಕೀಲ ಸಿ.ವಿ. ಸುಧೀಂದ್ರ, ಸಹಕಾರಿ ತಜ್ಞ ಆರ್.ಪಿ. ರವಿಶಂಕರ್ ಅವರೊಂದಿಗೆ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳಾಗಿ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಮಂಡ್ಯ ಜಿಲ್ಲಾ ಕಸಾಪ ಅಧ್ಯಕ ರವಿಕುಮಾರ ಚಾಮಲಾಪುರ ಅವರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ನಿಬಂಧನೆ ತಿದ್ದುಪಡಿ ಸಮಿತಿಯು ಒಟ್ಟು 6 ಬಾರಿ ಸಭೆ ಸೇರಿ, ಪ್ರತಿ ಸಭೆಯಲ್ಲಿಯೂ ಪ್ರಸ್ತುತ ಧ್ಯೇಯೋದ್ದೇಶಗಳನ್ನು ಹಾಗೂ ನಿಯಮ-ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಚರ್ಚಿಸಿ, ಉಳಿಸಿಕೊಳ್ಳಬೇಕಾದವುಗಳನ್ನು ಉಳಿಸಿಕೊಂಡು, ಹೊಸದಾಗಿ ಸೇರಿಸಬೇಕಾದವುಗಳನ್ನು ಸೇರಿಸಿ, ಸರ್ವಾನುಮತದಿಂದ ನಿರ್ಣಯ ಕೈಗೊಂಡು ಉದ್ದೇಶಿತ ತಿದ್ದುಪಡಿಗಳ ಕರಡನ್ನು ಸಿದ್ಧಪಡಿಸಿಕೊಟ್ಟಿತ್ತು. ನಂತರ ಜರುಗಿದ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪ್ರತ್ಯೇಕ ಸಭೆಗಳಲ್ಲಿ ಪರಿಷ್ಕøತ ಕರಡನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಸ್ತøತವಾಗಿ ಚರ್ಚಿಸಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅನುಮೋದನೆ ಪಡೆದು 2022ರ ಮೇ 1ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಶ್ರೀ ಕನಕ ಕಲಾಭವನದಲ್ಲಿ “ಕನ್ನಡ ಸಾಹಿತ್ಯ ಪರಿಷತ್ತಿನ ಸಕಲ ಸದಸ್ಯರ ವಿಶೇಷ ಸಭೆ”ಯಲ್ಲಿ ಹಾಜರಿದ್ದ ಶೇ.99ರಷ್ಟು ಸದಸ್ಯರು ಉದ್ದೇಶಿತ ತಿದ್ದುಪಡಿಗೆ ಅನುಮೋದನೆ ನೀಡುವ ಮೂಲಕ ಈ ಕ್ರಾಂತಿಕಾರಿ ಬದಲಾವಣೆಗೆ ಒಪ್ಪಿಗೆ ನೀಡಿದರು.

ಈ ಎಲ್ಲ ಪ್ರಕ್ರಿಯೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳು ಹಾಗೂ ನಿಯಮ-ನಿಬಂಧನೆಗಳನ್ನು ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸಹಕಾರ ಇಲಾಖೆಯು 2022ರ ಜೂ.30ರಂದು ಅಂಗೀಕರಿಸಿ, ನೋಂದಾಯಿಸಿ ಕೊಟ್ಟಿದ್ದು, ಅಂದಿನಿಂದಲೇ ಈ ಎಲ್ಲ ನಿಯಮಗಳು ಜಾರಿಗೆ ಬರುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.

ತಿದ್ದುಪಡಿಗಳ ಅನುಮೋದನೆಯಿಂದಾಗಿ ಹೊಸದಾಗಿ ಜಾರಿಯಲ್ಲಿ ಬರುವ ಪ್ರಮುಖ ಅಂಶಗಳು: 1) ‘ಕನ್ನಡ ಶಾಲೆಗಳನ್ನು ಉಳಿಸಿ–ಕನ್ನಡ ಬೆಳೆಸಿ’ ಧ್ಯೇಯೋದ್ದೇಶದಡಿ ಕನ್ನಡ ಶಾಲೆಗಳ ಪುನಃಶ್ಚೇತನವನ್ನು ಪರಿಷತ್ತಿನ ಘಟಕಗಳ ಮೂಲಕ ಗುರುತಿಸಿ, ಸರಕಾರ, ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವುದು.

2) ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕøತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ‘ಕನ್ನಡ-ಕನ್ನಡಿಗ-ಕರ್ನಾಟಕದ’ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಡಳಿತಾತ್ಮಕ ಸುಧಾರಣೆ ತರಲು, ಕಾಲಕ್ಕೆ ತಕ್ಕಂತೆ ನಿಬಂಧನೆಗಳನ್ನು ಪರಿಷ್ಕರಿಸಲು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಹಾಗೂ “ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸಲು” ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಲಾಗಿರುವುದರಿಂದ, ಈಗ ಇರುವ ಒಂದು ಸಾವಿರ ರೂಪಾಯಿಗಳನ್ನು(ಸದಸ್ಯತ್ವ ಶುಲ್ಕ ರೂ.500 ಮತ್ತು ಕನ್ನಡ ನುಡಿ ಶುಲ್ಕ ರೂ. 500) ಇನ್ನೂರ ಐವತ್ತು ರೂಪಾಯಿಗಳಿಗೆ ಇಳಿಸುವುದು. ಆಧುನಿಕ ಗುರುತಿನ ಚೀಟಿಯಾಗಿ ಸ್ಮಾಟ್ ಕಾರ್ಡ್ ವಿತರಿಸುವುದು.(ಸ್ಮಾರ್ಟ್ ಕಾರ್ಡ್ ವೆಚ್ಚ ಮತ್ತು ಸ್ಪೀಡ್ ಪೋಸ್ಟ್ ಅಂಚೆ ವೆಚ್ಚ ರೂ.150ಗಳನ್ನು ಪಡೆದುಕೊಂಡು) ಈ ಸ್ಮಾರ್ಟ್‍ಕಾರ್ಡ್ ಅನ್ನು ಚುನಾವಣೆಯ ಸಂದರ್ಭದಲ್ಲಿ ಗುರುತಿನ ಚೀಟಿಯಾಗಿ ಬಳಸುವುದಕ್ಕಾಗಿ, ಸದಸ್ಯರ ಅವಶ್ಯವಿರುವ ಎಲ್ಲ ಮಾಹಿತಿಗಳನ್ನು ಒಳಗೊಂಡ ಚಿಪ್ ಅಳವಡಿಸಲಾಗುವುದು.

3) ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ/ನಿವೃತ್ತರಾಗಿರುವ ಕನ್ನಡ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಆಜೀವ ಸದಸ್ಯತ್ವ ಮತ್ತು ಸ್ಮಾರ್ಟ್‍ಕಾರ್ಡ್ ಉಚಿತವಾಗಿ ನೀಡುವುದು.

4) ಸದಸ್ಯತ್ವ ಅರ್ಜಿಯನ್ನು ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಆನ್‍ಲೈನ್ ಮೂಲಕ ನೋಂದಾಯಿಸಲು ಅತ್ಯಾಧುನಿಕ ಆ್ಯಪ್ ಅನ್ನು ಅಳವಡಿಸಿಕೊಳ್ಳುವುದು. ಈ ಆ್ಯಪ್ ಮೂಲಕ ಸದಸ್ಯತ್ವ ವಿಳಾಸ ಬದಲಾವಣೆ ಸೇರಿದಂತೆ ಇತರೆ ಎಲ್ಲ ಮಾರ್ಪಾಡುಗಳನ್ನು ಆ್ಯಪ್ ಮೂಲಕವೇ ಮಾಡುವುದು.

5) ಹಿಂದಿನ ನಿಬಂಧನೆಯಲ್ಲಿ ಸೂಚಿಸಿರುವಂತೆ, ಕನ್ನಡ ಓದು-ಬರಹ ಬಲ್ಲ ವ್ಯಕ್ತಿಗಳಿಗೆ ಸದಸ್ಯತ್ವ ನೀಡುವ ಸಂಬಂಧ ಪ್ರಾಥಮಿಕ ಶಿಕ್ಷಣ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದರೂ, ಸಾಮಾನ್ಯ ವ್ಯಕ್ತಿಗಳು ಯಾವುದೇ ಅಡಚಣೆ ಇಲ್ಲದೇ ಸದಸ್ಯರಾಗಲು ನಿಯಮಗಳನ್ನು ರೂಪಿಸಲಾಗಿದೆ. ಜಾನಪದ, ನೃತ್ಯ, ಸಂಗೀತ, ರಂಗಭೂಮಿ, ಚಿತ್ರರಂಗ, ಚಿತ್ರಕಲೆ, ಯಕ್ಷಗಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಕೃಷಿಕರು, ಕುಶಲ ಕರ್ಮಿಗಳು, ಕಾರ್ಮಿಕರು, ಇನ್ನಿತರೆ ಸಾಮಾನ್ಯ ವ್ಯಕ್ತಿಗಳು ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ– ಇವುಗಳ ರಕ್ಷಣೆಗಾಗಿ ಶ್ರಮಿಸಿದ ಓದು, ಬರಹ ಬಾರದ ಕನ್ನಡಿಗರು, ಪರಿಷತ್ತಿನ ಸದಸ್ಯತ್ವವನ್ನು ಬಯಸಿ ಅರ್ಜಿ ಸಲ್ಲಿಸಿದಲ್ಲಿ ಕನಿಷ್ಠ ವಿದ್ಯಾರ್ಹತೆಯಿಂದ ವಿನಾಯಿತಿಯನ್ನು ನೀಡಲಾಗಿದೆ. ಜೊತೆಗೆ ಕನ್ನಡ ಓದಲು ಬರೆಯಲು ಬಾರದವರಿಗೆ ಪರಿಷತ್ತು ಸರಳ ಕನ್ನಡವನ್ನು ಕಲಿಸಲು ಅವಕಾಶ ಕಲ್ಪಿಸಲಾಗಿದೆ.

6) ಯಾವುದೇ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿ ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಪರಿಷತ್ತಿನಿಂದ ಆರ್ಥಿಕ ನೆರವು ಒದಗಿಸುವುದರ ಮೂಲಕ ಕನ್ನಡ ಅಧ್ಯಯನ ವಿಭಾಗಗಳು ಮುಚ್ಚದಂತೆ ಕ್ರಮವಹಿಸುವುದು.

7) ಗ್ರಾಮಮಟ್ಟಕ್ಕೂ ಪರಿಷತ್ತನ್ನು ಕೊಂಡೊಯ್ಯಬೇಕೆನ್ನುವ ಸದುದ್ದೇಶದಿಂದ ‘ಹೋಬಳಿ ಘಟಕ’ಗಳನ್ನು ಸ್ಥಾಪಿಸಿ, ಅವುಗಳಿಗೆ ಮಾನ್ಯತೆ ನೀಡುವುದು. ಅಂತೆಯೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರ ಘಟಕಗಳ ಅಡಿಯಲ್ಲಿ ‘ವಾರ್ಡ್ ಘಟಕ’ಗಳನ್ನು ಹಾಗೂ ಗಡಿನಾಡು ಘಟಕಗಳಲ್ಲಿ ಕನ್ನಡಿಗರ ಸಂಖ್ಯೆಯ ಅನುಗುಣವಾಗಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಸ್ಥಾಪಿಸುವುದು.

8) ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಪರಿಷತ್ತಿನ ವಿವಿಧ ಘಟಕಗಳಿಗೆ ಸ್ವಂತ ಕಟ್ಟಡ ಹೊಂದಲು ಕ್ರಮಕೈಗೊಂಡು, ಕಟ್ಟಡ ನಿರ್ಮಾಣಕ್ಕೆ ಧನಸಂಗ್ರಹ ಮಾಡುವುದು ಹಾಗೂ ಕಟ್ಟಡ ನಿರ್ಮಾಣದಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳುವುದು.
9) ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವಿಶ್ವವ್ಯಾಪಿಯಾಗಿ ವಿಸ್ತರಿಸಲು, ಕನಿಷ್ಠ 100 ಮಂದಿ ಪರಿಷತ್ತಿನ ಆಜೀವ ಸದಸ್ಯರು ಇರುವ ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ಹೊರದೇಶ ಘಟಕಗಳನ್ನು ಸ್ಥಾಪಿಸುವುದು.

10) ಕನ್ನಡದ ಹಿರಿಯ ವಿದ್ವಾಂಸರು, ಸಾಹಿತಿಗಳ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೂ ಪರಿಷತ್ತಿನ ಗೌರವ ಸದಸ್ಯತ್ವ(ಫೆಲೋಷಿಪ್)ವನ್ನು ನೀಡಲು ನಿಯಮ ರೂಪಿಸಿರುವುದು.

11) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ಸಂಘಟಿಸಲು ಜಿಲ್ಲಾಡಳಿತ ಮತ್ತು ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಂಬಂಧ ಕೇಂದ್ರ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರಗಳ ಕುರಿತು ನಿಯಮಗಳನ್ನು ರಚಿಸಲಾಗಿದೆ.

12) ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರವನ್ನು ಸದಸ್ಯರು ಪಡೆದುಕೊಳ್ಳಲು ಪರಿಷತ್ತಿಗೆ ಮಾಹಿತಿಹಕ್ಕು ಅಧಿನಿಯಮ 2005 ಅನ್ವಯಿಸಿರುವುದು.
13) ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟೀಕರಣಗೊಳಿಸಿರುವುದು.

14) ಯಾವುದೇ ಸದಸ್ಯನ ವರ್ತನೆಯು ಪರಿಷತ್ತಿನ ಘನತೆ, ಗೌರವ ಹಾಗೂ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ಕಂಡುಬಂದಾಗ ಅಂತಹ ಸದಸ್ಯತ್ವವನ್ನು ನಿಯಮಾನುಸಾರ ಅಮಾನತ್ತುಗೊಳಿಸುವ ಅಧಿಕಾರವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ನೀಡಿರುವುದು.

15) ಪರಿಷತ್ತಿನ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಅವಶ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಹಾಗೂ ಸಿಬ್ಬಂದಿಗಳ ನಿರ್ವಹಣೆಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸರಕಾರದ ಅನುಮತಿಯೊಂದಿಗೆ ರಚಿಸಿಕೊಳ್ಳಲು ಸೇವಾ ನಿಯಮಗಳನ್ನು ರೂಪಿಸಲಾಗಿದೆ.

16) ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಳ್ಳುವ ಗ್ರಂಥಗಳ ಮುದ್ರಣ ವೆಚ್ಚಕ್ಕಾಗಿ, ದಾನಿಗಳಿಂದ ‘ಗ್ರಂಥ ದಾಸೋಹ’ ಯೋಜನೆಯಡಿ ದೇಣಿಗೆಯನ್ನು ಸ್ವೀಕರಿಸುವುದು.

17) ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಕಾರ್ಯಕ್ರಮಗಳ ಯಶಸ್ಸಿಗಾಗಿ ಪರಿಷತ್ತಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಲು ಹಾಗೂ ಪರಿಷತ್ತಿಗೆ ಮಾರ್ಗದರ್ಶನ ಮಾಡಲು ‘ಮಾರ್ಗದರ್ಶಿ ಸಮಿತಿ’ ರಚನೆ ಮಾಡಿ, ವಿವಿಧ ವರ್ಗಗಳ ತಜ್ಞ, ಗಣ್ಯವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸುವುದು.

18) ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಹಾಗೂ ಅಲ್ಪಸಂಖ್ಯಾತರ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಟ್ಟು ಆ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಜಿಲ್ಲಾ ಸಂಘಗಳ ರಿಜಿಸ್ಟ್ರಾರ್, ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರು ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸುವ ಮೂಲಕ ಕಾರ್ಯಕಾರಿ ಸಮಿತಿಯ ಬಲವನ್ನು ಹೆಚ್ಚಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆಗಳು 2026ನೆ ಇಸವಿಯಲ್ಲಿ ನಡೆಯಲಿರುವ ಪರಿಷತ್ತಿನ ಚುನಾವಣೆಗಳಿಗೆ ಸಂಬಂಧಿಸಿದಂತೆ ಆ್ಯಪ್ ಮೂಲಕ ಮತದಾನ ನಡೆಸಿ ಚುನಾವಣಾ ವೆಚ್ಚ ತಗ್ಗಿಸುವಿಕೆ, ಚುನಾವಣಾ ಅಕ್ರಮಕ್ಕೆ ಕಡಿವಾಣ, ತ್ವರಿತ ಹಾಗೂ ಪಾರದರ್ಶಕ ಚುನಾವಣೆ ಸೇರಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು 2025ನೆ ಇಸವಿಯಲ್ಲಿ ತಿದ್ದುಪಡಿಯಲ್ಲಿ ತರಲಾಗುವುದು ಎಂದು ಮಹೇಶ ಜೋಶಿ ಹೇಳಿದರು.

ಸದಸ್ಯತ್ವ ಆನ್‍ಲೈನ್ ನೋಂದಣಿಗಾಗಿ ಆ್ಯಪ್ ಸಿದ್ಧಗೊಂಡಿದ್ದು, ಈ ಆ್ಯಪ್ ಮತ್ತು ಪರಿಷ್ಕøತ ಜಾಲತಾಣ (ವೆಬ್ ಸೈಟ್)ವನ್ನು ಸದ್ಯದಲ್ಲೇ ಗಣ್ಯರ ಸಮ್ಮುಖದಲ್ಲಿ ಮುಖ್ಯಮಂತ್ರಿ ಅವರ ಹಸ್ತದಿಂದ ಉದ್ಘಾಟನೆ ಮಾಡುವ ಮೂಲಕ ಆ್ಯಪ್ ಲೋಕಾರ್ಪಣೆ ಮಾಡಲಾಗುವುದು ಎಂದು ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top