ರಾಜ್ಯಸಭೆಯಲ್ಲಿ ಎರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್
ಜಗ್ಗೇಶ್- ರಾಜ್ಯ ಸಭೆ ಸಂಸದರು
ಹೊಸದಿಲ್ಲಿ: ಕರ್ನಾಟಕದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಸಂಸದ ನಟ ಜಗ್ಗೇಶ್ ಅವರು ರಾಜ್ಯಸಭೆಯಲ್ಲಿ ಸೋಮವಾರ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜುಲೈ 8ರಂದು ಜಗ್ಗೇಶ್ ಅವರು ಹೊಸದಾಗಿ ಆಯ್ಕೆಯಾದ ಇತರ ಸಂಸದರೊಂದಿಗೆ ರಾಜ್ಯಸಭಾ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರು ಶ್ರೀ ರಾಘವೇಂದ್ರ ಸ್ವಾಮಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಜಗ್ಗೇಶ್ ಪ್ರಮಾಣವಚನ ಕ್ರಮಬದ್ಧವಾಗಿದೆಯಾ ಎಂಬುದನ್ನು ಪರಿಶೀಲಿಸುವಂತೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಬಳಿಕ ಅಧಿಕಾರಿಗಳು ಇದು ಕ್ರಮಬದ್ಧವಾಗಿಲ್ಲ ಮತ್ತು ಸದಸ್ಯರು ಮತ್ತೆ ಪ್ರಮಾಣ ವಚನ ಸ್ವೀಕರಿಸುವ ಅಗತ್ಯವಿದೆ ಎಂದು ನಾಯ್ಡು ಅವರಿಗೆ ತಿಳಿಸಿದ್ದರು ಎಂದು ರಾಜ್ಯಸಭೆಯ ಮೂಲಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ಸೋಮವಾರ ಮತ್ತೆ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ರಾಜ್ಯದಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೇಹರ್ ಸಿಂಗ್ ಬಿಜೆಪಿಯಿಂದ ಆಯ್ಕೆಯಾಗಿದ್ದರೆ,ಕಾಂಗ್ರೆಸ್ ನೀಂದ ಜೈರಾಮ್ ರಮೇಶ್ ಆಯ್ಕೆಯಾಗಿದ್ದರು.