ಎಸಿಬಿ ರದ್ದು ವಿಚಾರ: ಮೂರೂ ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ ಎಂದ ಎಚ್.ವಿಶ್ವನಾಥ್
''ಈ ಬಾರಿ ದೇವೇಗೌಡರಿಂದ ದಸರಾ ಉದ್ಘಾಟನೆ ಮಾಡಿಸಿ''

ಮೈಸೂರು,ಆ.12: ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ನೀಡಿದ ತೀರ್ಪನ್ನ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, '2016 ರಲ್ಲಿ ಲೋಕಾಯುಕ್ತವನ್ನ ತಿರುಚಿ ಎಸಿಬಿ ತರಲಾಗಿತ್ತು. ಒಂದು ಕಾನೂನು ಇರುವಾಗಲೇ ಮತ್ತೊಂದು ಮಾಡುವುದು ಕಾನೂನು ವಿರೋಧ ಅಂತಾ ಜಸ್ಟಿಸ್ ಗೋಪಾಲರಾವ್ ಅವರು ಹೇಳಿದ್ರು. ಈಗ ಎಸಿಬಿ ಹೋಗಿದೆ, ಲೋಕಾಯುಕ್ತ ಬಂದಿದೆ. ಇದನ್ನ ಅತ್ಯಂತ ಗೌರವದಿಂದ ನಾನು ಸ್ವಾಗತಿಸುತ್ತೇನೆ' ಎಂದರು.
'ಮೂರು ರಾಜಕೀಯ ಪಕ್ಷಗಳು ಬೆತ್ತಲಾಗಿವೆ. ಸಿಎಂ ಪ್ರತಿಕ್ರಿಯೆ ನೀಡಿ, ಎಸಿಬಿ ರದ್ದು ಮಾಡಿರವುದನ್ನು ಕೇಳಿದ್ದೆನೆ. ಆದೇಶ ಪ್ರತಿ ಗಮನಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ರಾಜ್ಯದ ಸಿಎಂ ಏನು ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಸಿಬಿ ರದ್ದು ಸ್ವಾಗತಾರ್ಹ ಎಂದಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಎಸಿಬಿ ರದ್ದಿನಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬ ವಿಶ್ವಾಸವಿಲ್ಲ ಎಂದಿದ್ದಾರೆ. ಎಸಿಬಿ ಹಲವು ರಾಜ್ಯಗಳಿಲ್ಲಿದೆ. ಮೂರು ಪಕ್ಷದ ನಾಯಕರು ಬೆತ್ತಲಾಗಿದ್ದಾರೆ' ಎಂದು ಕಿಡಿಕಾರಿದರು.
'ಲೋಕಾಯುಕ್ತಕ್ಕೆ ಮತ್ತೆ ತಿದ್ದುಪಡಿ ಆಗಬೇಕು. ಅಧಿಕಾರಿಗಳು ಮೂರು ವರ್ಷಗಳು ಅಲ್ಲೇ ಇರಬೇಕು. ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸ್ವತಂತ್ರ ಇರಬೇಕು. ಲೋಕಾಯುಕ್ತ ಮತ್ತಷ್ಟು ಬಲಿಷ್ಠವಾಗಬೇಕು. ಪ್ರಸ್ತುತ ಸರ್ಕಾರ ಕೋರ್ಟ್ ಕೊಟ್ಟಿರುವ ಆದೇಶವನ್ನ ಪಾಲಿಸಬೇಕು' ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.
'ಯಾವುದೋ ಪಕ್ಷಕ್ಕಾಗಿ ಕಾನೂನುಗಳಿಲ್ಲ.ಆಡಳಿತ ಮಾಡುವವರು ಇದನ್ನ ಸರಿಯಾಗಿ ನಡೆಸಿಕೊಳ್ಳಬೇಕು. ರಾಜ್ಯದ ಹಿತದೃಷ್ಟಿಯಿಂದ ಲೋಕಾಯುಕ್ತವನ್ನ ಬಳಸಬೇಕು. ಕೋರ್ಟ್ ತೀರ್ಪನ್ನ ಸರ್ಕಾರ ಸರಿಯಾಗಿ ಪಾಲಿಸಬೇಕು' ಎಂದು ಎಚ್. ವಿಶ್ವನಾಥ್ ಹೇಳಿದರು.
'ಕಳೆದ ಏಳು ವರ್ಷಗಳಿಂದ ಮೈಸೂರು ಪೊಲೀಸ್ ಭವನದ ಲೆಕ್ಕ ಕೊಟ್ಟಿಲ್ಲ. ಪೊಲೀಸರೇ ಹೀಗಾದರೆ ಬೇರೆಯವರು ಕಥೆ ಏನು…? ಹೀಗೆ ಬೇಕಾದಷ್ಟು ಕೇಸುಗಳಿವೆ. ಅಂತಹ ಎಲ್ಲಾ ಕೇಸ್ಗಳ ಸಮಗ್ರ ತನಿಖೆ ಆಗಬೇಕು' ಎಂದು ಎಚ್. ವಿಶ್ವನಾಥ್ ಆಗ್ರಹಿಸಿದರು.
ಈ ಬಾರಿಯ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಯ್ಕೆ ಮಾಡಿ. ಅವರು ಈ ನಾಡಿನ ಸಾಕ್ಷಿಪ್ರಜ್ಞೆ. ದೇಶದ ಪ್ರಧಾನಿ ಆದವರು ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕು.
- ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ







