ಮೈಸೂರು ದಸರಾ ಹಿನ್ನೆಲೆ: ಇಂದಿನಿಂದ ಆನೆಗಳಿಗೆ ತಾಲೀಮು ಆರಂಭ
ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದಿನಿಂದ ದಸರಾ ಗಜಪಡೆ ತಾಲೀಮು ಆರಂಭ ಮಾಡಲಾಗಿದೆ.
ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಪ್ರತಿ ದಿನ ಬೆಳಗ್ಗೆ - ಸಂಜೆ ತಾಲೀಮು ನಡೆಸುವುದು ವಾಡಿಕೆ. ಅಂತೆಯೇ ರವಿವಾರ ತಾಲೀಮು ಆರಂಭಕ್ಕೂ ಮುನ್ನ ಅರಮನೆ ಅವರಣದಲ್ಲಿ ಅನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊರೋನ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗಿತ್ತು. ಎರಡು ವರ್ಷಗಳ ನಂತರ ಮತ್ತೆ ಎಂದಿನಂತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆಗಳು ವಾಯುವಿಹಾರಕ್ಕೆ ತೆರಳುತ್ತಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಸರ್ಕಲ್, ಬಂಬೂಬಝಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪಿ, ಮತ್ತೆ ಬನ್ನಿ ಮಂಟಪದಿಂದ ಅರಮನೆಗೆ ಆನೆಗಳು ವಾಪಸ್ ಆದವು.
ಇದೇ ವೇಳೆ ಮಾಧ್ಯಮದವರೊಂದಿಗೆ ಅರಣ್ಯ ಅಧಿಕಾರಿ ಕರಿಕಾಳನ್ ಮಾತನಾಡಿ ದಸರಾ ಮಹೋತ್ಸವ ಹಿನ್ನಲೆ ಆನೆಗಳಿಗೆ ಇಂದಿನಿಂದ ತಾಲೀಮು ಪ್ರಾರಂಭ ಮಾಡಲಾಗಿದೆ. ಆನೆಗಳಿಗೆ ತೂಕ ಮಾಡಿಸಲಾಗಿದೆ. ಎಲ್ಲ ಅನೆಗಳು ಅರೋಗ್ಯವಾಗಿವೆ. ಒಂದು ವಿಶೇಷವೆನೆಂದರೇ ನಗರ ವಾತಾವರಣಕ್ಕೆ ಆನೆಗಳು ಹೊಂದಿಕೊಂಡಿವೆ. ಒಂದು ವಾರದ ನಂತರ ಭಾರ ಹೊರುವ ತಾಲೀಮು ಪ್ರಾರಂಭ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.