ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿಯೊಂದಿಗೆ BJP ಶಾಸಕ: ಫೋಟೊ ವೈರಲ್
'ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಗೆ ಏನು ಕೆಲಸ' ಎಂದು ಪ್ರಶ್ನಿಸಿದ ಕಾಂಗ್ರೆಸ್

ಬೆಂಗಳೂರು: ಮಡಿಕೇರಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದ ಆರೋಪಿ ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಪ್ರತಿಪಾದಿಸಿದೆ.
ಇದೀಗ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ನೊಂದಿಗೆ (Appachu Ranjan) ಆರೋಪಿ ಸಂಪತ್ ನಿಂತಿರುವ ಫೋಟೊ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ.
''ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ ಬಿಜೆಪಿ ಉತ್ತರಿಸಬೇಕು. ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್ಗೇಕೆ ಆಪ್ತನಾಗಿದ್ದಾನೆ'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
''ಬಿಜೆಪಿ ಹೇಳುವ ಸುಳ್ಳುಗಳಿಗೆ 'ಸತ್ಯ'ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ! ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ. ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ? ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಗುವುದು ಹೇಗೆ?'' ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾಗಕ್ಕ ಗುಬ್ಬಕ್ಕನ ಕತೆ ಕಟ್ಟಿರುವ @BJP4Karnataka ಉತ್ತರಿಸಬೇಕು.
— Karnataka Congress (@INCKarnataka) August 20, 2022
ಅವರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ?
ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಆತ ಅಪ್ಪಚ್ಚು ರಂಜನ್ಗೇಕೆ ಆಪ್ತನಾಗಿದ್ದಾನೆ. pic.twitter.com/t1FWjZFvDk







