ಸಚಿವ ವಿ.ಸೋಮಣ್ಣ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಪುನರ್ ಪರಿಗಣಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಸೆ.6: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪುನರ್ ಪರಿಗಣಿಸುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಮರಳಿಸಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತಮ್ಮ ವಿರುದ್ಧ ಜಾರಿ ಮಾಡಿರುವ ಸಮನ್ಸ್ ರದ್ದು ಕೋರಿ ಸಚಿವ ವಿ.ಸೋಮಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಆದೇಶ ನೀಡಿದೆ.
ಸಿಆರ್ಪಿಸಿ 202ರ ಅಡಿ ತನಿಖಾಧಿಕಾರಿಯಿಂದ ಸ್ಪಷ್ಟನೆ ಪಡೆದು ಕೇಸ್ನ್ನು ಪುನರ್ ಪರಿಗಣಿಸಬೇಕೆಂದು ವಿಶೇಷ ಕೋರ್ಟ್ ನ್ಯಾಯಪೀಠವು ಆದೇಶಿಸಿದೆ.
ಪ್ರಕರಣವೇನು?: ನಗರದ ರಾಮಕೃಷ್ಣ ಎಂಬುವರು 2013ರಲ್ಲಿ ಸಚಿವ ಸೋಮಣ್ಣ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿ ಬಿ ರಿಪೋರ್ಟ್ ಸಲ್ಲಿಸಿದ್ದರು.
ಕೇಸ್ನ ತನಿಖೆ ಅಸಮರ್ಪಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಲೋಕಾಯುಕ್ತ ನ್ಯಾಯಾಲಯ ಬಿ ರಿಪೋರ್ಟ್ ರದ್ದುಗೊಳಿಸಿತ್ತು. ಈ ಅಂಶವನ್ನು ದೂರುದಾರ ರಾಮಕೃಷ್ಣ ದಾಖಲೆಗಳೊಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.