ಬೆಳಗಾವಿ: ಸರಣಿ ಅಪಘಾತದಲ್ಲಿ ಎಎಸ್ಐ ಕುಟುಂಬ ಸೇರಿ ನಾಲ್ವರು ಮೃತ್ಯು
ಸಾಂದರ್ಭಿಕ ಚಿತ್ರ
ಬೆಳಗಾವಿ: ಕಾರು ಮತ್ತು ಬೈಕ್ಗೆ, ಲಾರಿ ಢಿಕ್ಕಿ ಹೊಡೆದ ಪರಿಣಾಮ ಎಎಸ್ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ರವಿವಾರ ನಡೆದಿದೆ.
ಮೃತರನ್ನು ಬೆಳಗಾವಿ ನಿವಾಸಿ, ರುಕ್ಮಿಣಿ ಹಳಕಿ(48) ಪುತ್ರಿ ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ಬೈಕ್ನಲ್ಲಿದ್ದ ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಎಂದು ಗುರುತಿಸಲಾಗಿದೆ.
ರುಕ್ಮಿಣಿ ಹಳಕಿ ಎಂಬುವರು ಕುಡಚಿ ಪೊಲೀಸ್ ಠಾಣೆಯ ಎಎಸ್ಐ ಪರಶುರಾಮ ಹಲಕಿರವರ ಪತ್ನಿಯಾಗಿದ್ದು, ಅಪಘಾತದ ಸಂದರ್ಭದಲ್ಲಿ ಪರಶುರಾಮ ಅವರು ವಾಹನದಲ್ಲಿ ಇರಲಿಲ್ಲ. ಅವರ ಪತ್ನಿ ಹಾಗೂ ಪುತ್ರಿ ಕಾರಿನಲ್ಲಿ ಯರಗಟ್ಟಿ ಕಡೆಗೆ ಹೊರಟಿದ್ದರು. ಇದೇ ವೇಳೆ ಯರಗಟ್ಟಿ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಸಂಚರಿಸುತ್ತಿದ್ದ ಸಿಮೆಂಟ್ ತುಂಬಿದ್ದ ಲಾರಿ ಮಧ್ಯೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಕಾರಿನ ಹಿಂದೆಯೇ ಹೊರಟಿದ್ದ ಬೈಕ್ ಸವಾರರಿಗೂ ಈ ವಾಹನಗಳು ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಕಾರು ಮತ್ತು ಬೈಕ್ ಸಂಪೂರ್ಣ ನಜ್ಜುಗುಜ್ಜಾದವು ಎಂದು ಹೇಳಲಾಗಿದೆ.