ವೃದ್ಧನಿಂದ ದಲಿತ ಬಾಲಕಿಯ ಅತ್ಯಾಚಾರ: FIR ದಾಖಲು
ಮಂಡ್ಯ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ
ಮಂಡ್ಯ, ಅ.14: ಮಳವಳ್ಳಿ ತಾಲೂಕು ಹಲಗೂರು ಸಮೀಪದ ಗ್ರಾಮವೊಂದರ ದಲಿತ ಬಾಲಕಿ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರಕ್ಕೊಳಗಾದ ಬಾಲಕಿಗೆ ತಂದೆ ಇಲ್ಲದ ಕಾರಣ ಆಕೆಯ ತಾಯಿ ಮಗಳನ್ನು ಅಜ್ಜಿ-ತಾತನ ಮನೆಯಲ್ಲಿ ಬಿಟ್ಟು ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಅಜ್ಜಿ ತಾತನ ಮನೆಯಲ್ಲಿದ್ದ ಬಾಲಕಿ ಗ್ರಾಮದ ಸರಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ.
ಅ.6ರಂದು ಅಜ್ಜಿಯ ಜತೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ ಈ ಬಾಲಕಿಗೆ ಊಟ, ತಿಂಡಿ ಕೊಡಿಸಿದ ವೃದ್ಧ, ಸಮೀಪದ ಬಸವನಬೆಟ್ಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಾರನೆ ದಿನವೂ ಮತ್ತೆ ಅತ್ಯಾಚಾರ ನಡೆಸಿ ಅಜ್ಜಿ ಮನೆಗೆ ತಂದು ಬಿಟ್ಟಿದ್ದಾನೆ ಎನ್ನಲಾಗಿದೆ.
ಎಲ್ಲಿಗೆ ಹೋಗಿದ್ದೆ ಎಂದು ಅಜ್ಜಿ ಕೇಳಿದಾಗ ಬಾಲಕಿ ನಡೆದ ವಿಷಯ ತಿಳಿಸಿದ್ದಾಳೆ. ಅ.8ರಂದು ಬಾಲಕಿ ಚಿಕ್ಕಪ್ಪ ಗ್ರಾಮದ ಮುಖಂಡರ ಜತೆ ಹಲಗೂರು ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಮಂಡ್ಯ | ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಕುಟುಂಬಸ್ಥರ ಆಕ್ರಂದನ ನಡುವೆ ಅಂತ್ಯಸಂಸ್ಕಾರ