ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ: ಇದು ಬಿಜೆಪಿ ಸಂಸ್ಕೃತಿ ಎಂದ ಕುಮಾರಸ್ವಾಮಿ
ಮಡಿಕೇರಿ: ಸಚಿವ ಸೋಮಣ್ಣ(Somanna) ಅವರು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಇದು ಬಿಜೆಪಿಯವರ (BJP) ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಅವರು ಎರಡು ರೀತಿಯ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ, ಒಳಗೆ ಮತ್ತೊಂದು ರೀತಿ ಇರುತ್ತಾರೆ. ಬಿಜೆಪಿಯ ಹಲವು ಸಚಿವರು ಹಿಂದೆ ಹೀಗೆ ನಡೆದುಕೊಂಡಿದ್ದು ಗೊತ್ತೇ ಇದೆ ಎಂದು ಟೀಕಿಸಿದರು.
ಒಂದು ದೇಶ ಒಂದೇ ಭಾಷೆ ಹಿಂದಿ ಆಗಿರಬೇಕು, ಹಿಂದೂ ರಾಷ್ಟ್ರವಾಗಿರಬೇಕು ಎಂದು ಸಾತ್ಯಕಿ ಸಾವರ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು, ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ, ಸಾತ್ಯಕಿ ಯಾರು ಎಂದು ಪ್ರಶ್ನಿಸಿದ ಅವರು ಮೊದಲು ಜನರ ಬದುಕನ್ನು ಕಟ್ಟಲು ನೋಡಿ ಎಂದರು.