PSI ಹಗರಣ: ಅಮೃತ್ ಪೌಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ
ಬೆಂಗಳೂರು, ಡಿ. 3: ಸುಮಾರು 545 ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಸೈ) ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪೌಲ್ ಅವರ ಪ್ರಾಸಿಕ್ಯೂಷನ್ಗೆ ಸರಕಾರ ಅನುಮತಿ ನೀಡಿದೆ.
ಕೆಲ ದಿನಗಳ ಹಿಂದೆ ನಗರದ 24ನೆ ಸಿಸಿಹೆಚ್ ಕೋರ್ಟ್, ಅಮ್ರಿತ್ ಪೌಲ್ಗೆ ಜಾಮೀನು ಮಂಜೂರಿಗೆ ತಿರಸ್ಕರಿಸಿ ಆದೇಶ ಹೊರಡಿಸಿತ್ತು. ಈಗ ಅಮ್ರಿತ್ ಪೌಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಸರಕಾರ ಅನುಮತಿ ನೀಡಿದೆ.
ಐಪಿಸಿ ಸೆಕ್ಷನ್ 120ಬಿ(ಅಪರಾಧಿಕ ಒಳಸಂಚು), 409(ಸರಕಾರಿ ನೌಕರನಾಗಿ ಅಪರಾಧಿಕ ನಂಬಿಕೆ ದ್ರೋಹ), 420(ವಂಚನೆ), 465(ಸುಳ್ಳು ಸ್ಪಷ್ಟನೆಗೆ ದಂಡನೆ), 468(ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 471(ಸುಳ್ಳು ಸ್ಪಷ್ಟನೆ ದಸ್ತಾವೇಜು ಅಭಿಲೇಖ ನೈಜವಾದುದೆಂದು ಬಳಕೆ) ಅಡಿ ಅಮ್ರಿತ್ ಪೌಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಅಮ್ರಿತ್ ಪೌಲ್ ವಿರುದ್ಧ ಹಲವು ಸಾಕ್ಷ್ಯಗಳು ದೊರೆತಿದ್ದು, ಸಿಆರ್ಪಿಸಿ 164 ಅಡಿಯಲ್ಲಿ ನ್ಯಾಯಾಲಯದ ಮುಂದೆ ಅಮ್ರಿತ್ ಪೌಲ್ ವಿರುದ್ಧದ ಹೇಳಿಕೆಗಳನ್ನು ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ.
ಕಳೆದ ಮೇ ನಲ್ಲಿಯೇ ಪಿಎಸ್ಸೈ ಪರೀಕ್ಷಾ ಅಕ್ರಮ ನೇಮಕಾತಿ ಕುರಿತಂತೆ ದೂರು ಬಂದಿದ್ದವು. ಅಕ್ಟೋಬರ್ನಲ್ಲಿ ಬಂಧಿತ ಡಿವೈಎಸ್ಪಿ ಶಾಂತರಾಜು ಸೇರಿ ಪಿಎಸೈ ಅವ್ಯವಹಾರದ ಬಗ್ಗೆ ಪಿಟೇಶನ್ ಹಾಕಲಾಗಿತ್ತು. ನೇಮಕಾತಿ ವಿಭಾಗದ ಆಡಳಿತಾಧಿಕಾರಿ ಸುನೀತಾ ಬಾಯಿಗೆ ಕೆಲವರು ದೂರು ನೀಡಿದ್ದರು.
ಈ ವೇಳೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಗಮನಕ್ಕೆ ತಂದಿದ್ದರು. ಈ ವೇಳೆ ಪಿಎಸ್ಸೈ ಪರೀಕ್ಷಾ ಅಕ್ರಮ ದೂರಿನ ಪ್ರತಿ ಕಸದ ಬುಟ್ಟಿಗೆ ಎಸೆಯುವಂತೆ ಅಮ್ರಿತ್ ಪೌಲ್ ಹೇಳಿದ್ದರು. ಈ ಬಗ್ಗೆ ಸಿಐಡಿ ತನಿಖೆ ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದ್ದು ದಾಖಲಾಗಿದೆ. ಈ ಕುರಿತು ನ್ಯಾಯಾಲಯದ ಮುಂದೆ ಸುನೀತಾ ಬಾಯಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.