ನಕಲಿ ದಾಖಲೆ ಸೃಷ್ಟಿಸಿ ಶಾಸಕನ ನಿವೇಶನವನ್ನೇ ನೋಂದಣಿ ಮಾಡಿಕೊಂಡ ವಂಚಕರು!
ಬೆಂಗಳೂರು: ಸರ್ಕಾರದಿಂದ ತಮಗೆ ಮಂಜೂರಾಗಿದ್ದ ಜಿ ವರ್ಗದ 50/80 ಅಡಿ ನಿವೇಶನವನ್ನು 10 ಮಂದಿ ವಂಚಕರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಪೈಕಿ ಒಬ್ಬರ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆಡಳಿತಾರೂಢ ಬಿಜೆಪಿ ಶಾಸಕ ಆಪಾದಿಸಿದ್ದಾರೆ.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ನೀಡಿದ ದೂರಿನ ಆಧಾರದಲ್ಲಿ ಸಂಜಯನಗರ ಪೊಲೀಸರು ಶಂಕಿತರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಬಿಡಿಎ ನಿವೇಶನಕ್ಕೆ ಕಿಡಿಗೇಡಿಗಳು ಕಾಂಪೌಂಡ್ ಕೂಡಾ ಕಟ್ಟಿಕೊಂಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಂಜಯನಗರದ ಲೊಟ್ಟೆಗೊಲ್ಲಹಳ್ಳಿ ಗ್ರಾಮದಲ್ಲಿ 1986ರಲ್ಲಿ 4 ಎಕರೆ 39 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ ನಿರ್ಮಿಸಿದ ವಸತಿ ನಿವೇಶನಗಳಲ್ಲಿ ಸೈಟ್ ನಂ. 14ನ್ನು 2008ರಲ್ಲಿ ತಮಗೆ ಹಂಚಿಕೆ ಮಾಡಲಾಗಿತ್ತು. ಬಳಿಕ 2015ರಲ್ಲಿ ನಿವೇಶನ ಸಂಖ್ಯೆ 14ರ ಬದಲಾಗಿ ನಿವೇಶನ ಸಂಖ್ಯೆ 3ನ್ನು ಸರ್ಕಾರ ಹಂಚಿಕೆ ಮಾಡಿತ್ತು ಎಂದು ವಿವರಿಸಿದ್ದಾರೆ.
ಈ ನಿವೇಶನ ತಮ್ಮ ಹೆಸರಿನಲ್ಲಿತ್ತು ಹಾಗೂ ಸ್ವಾಧೀನದಲ್ಲಿತ್ತು. ಆದರೆ ಕೆಲ ಕಿಡಿಗೇಡಿಗಳು ಕಾನೂನುಬಾಹಿರವಾಗಿ ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ದಾಖಲೆಗಳನ್ನು ಬಳಸಿ, ಶಂಕಿತರ ಪೈಕಿ ಒಬ್ಬನ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ವಂಚಕರು ತಮ್ಮ ನಿವೇಶನದಲ್ಲಿ ಮಾತ್ರವಲ್ಲದೇ ಇತರ ಶಾಸಕರಿಗೆ ಹಂಚಿಕೆಯಾದ ಸೈಟ್ ನಂ. 1 ಮತ್ತು 2ಕ್ಕೂ ಆವರಣಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.