ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರ: ಸ್ಪಷ್ಟನೆ ನೀಡಿದ ಕೆಆರ್‌ಪಿಪಿ ಮುಖಂಡ

ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರು ಇತ್ತೀಚೆಗೆ ಬಿಜೆಪಿಯ ಕೆಲ ನಾಯಕರನ್ನ ಭೇಟಿಯಾಗಿದ್ದು, ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಅವರ ಪಕ್ಷದ (ಕೆಆರ್‌ಪಿಪಿ) ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ್ ಗೌಡ, ಹೇರೂರು ಸ್ಪಷ್ಟನೆ ನೀಡಿದ್ದಾರೆ.
'ಸಾಹೇಬರನ್ನು (ಜನಾರ್ದನ ರೆಡ್ಡಿ) ಬಿಜೆಪಿ ಹೈಕಮಾಂಡ್ ಮನವೊಲಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಟುವಟಿಕೆಯನ್ನು ಸ್ಥಗಿತಗೊಳಿಸುವ ಕುರಿತಾಗಿ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದೆಲ್ಲ ಊಹಾಪೋಹ ಹಾಗೂ ಸಂಪೂರ್ಣ ಸುಳ್ಳು ಮಾಹಿತಿ ಆಗಿರುತ್ತದೆ. ಸನ್ಮಾನ್ಯ ಶ್ರೀ ಜನಾರ್ಧನ ರೆಡ್ಡಿ ಸಾಹೇಬರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ರಾಜ್ಯದಲ್ಲಿ ಬಲಿಷ್ಠ ಗೊಳಿಸುವ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಢ ಸಂಕಲ್ಪದಿಂದ ಅಖಾಡಕ್ಕೆ ಬಂದಿರುತ್ತಾರೆ. ಕಾರಣ ಪಕ್ಷದ ಮುಖಂಡರು, ಕಾರ್ಯಕರ್ತರು, ಹಾಗೂ ಅಭಿಮಾನಿಗಳು ಇಂಥಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು' ಎಂದು ಮನೋಹರ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮಹತ್ವದ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪರ ಪುತ್ರಿಯಿಂದ ಪ್ರಚಾರ







