ಗಿಫ್ಟ್ ವೋಚರ್ ನೀಡಿಕೆ, ಪೂರೈಕೆಗೆ ಜಿಎಸ್ಟಿ ಅನ್ವಯಿಸದು: ಹೈಕೋರ್ಟ್
ಬೆಂಗಳೂರು, ಫೆ.16: ಸರಕು ಮತ್ತು ಸೇವೆಗಳ ಅಡಿಯಲ್ಲಿ ಗಿಫ್ಟ್ ವೋಚರ್ಗಳು ಬರುವುದಿಲ್ಲ. ಹೀಗಾಗಿ, ವೋಚರ್ ನೀಡುವುದು ಮತ್ತು ಪೂರೈಕೆಗೆ ಜಿಎಸ್ಟಿ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ಪ್ರೀಮಿಯರ್ ಸೇಲ್ಸ್ ಪ್ರಮೋಷನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಮಾನ್ಯ ಮಾಡಿದೆ.
ಗಿಫ್ಟ್ ಮತ್ತು ಕ್ಯಾಶ್ ಬ್ಯಾಕ್ ವೋಚರ್ಗಳು ಸೇರಿದಂತೆ ವೋಚರ್ಗಳು ಸಾಧನಗಳಾಗಿದ್ದು, ಸರಕು ಮತ್ತು ಸೇವೆಗಳ ಪರಿಗಣನೆಗೆ ಅವುಗಳನ್ನು ಒಪ್ಪಿಕೊಳ್ಳಲಾಗುತ್ತದೆ. ಅವುಗಳು ತಮ್ಮದೇ ಆದ ಅಂತರ್ಗತ ಮೌಲ್ಯ ಹೊಂದಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ (ಸಿಜಿಎಸ್ಟಿ) ಅಡಿ ವೋಚರ್ಗಳು ಹಣದ ವಿಭಾಗದಲ್ಲಿ ಬಂದರೂ ಅವುಗಳನ್ನು ಕಾಯಿದೆಯ ಸರಕು ಮತ್ತು ಸೇವಾ ಕಾಯಿದೆಯ ವ್ಯಾಖ್ಯಾನದಿಂದ ಹೊರಗಿರಿಸಲಾಗಿದೆ ಎಂದು ಪೀಠ ಹೇಳಿದೆ.
ಅರ್ಜಿದಾರ ಸಂಸ್ಥೆಯು ಗಿಫ್ಟ್ ವೋಚರ್ಗಳು, ಕ್ಯಾಶ್ ಬ್ಯಾಕ್ ವೋಚರ್ಗಳು ಮತ್ತು ಇ-ವೋಚರ್ ಸೇರಿದಂತೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್(ಪಿಪಿಐ) ಅನ್ನು ವಿತರಕರಿಂದ ಪಡೆದು ಅದನ್ನು ತನ್ನ ಗ್ರಾಹಕರಿಗೆ ಪೂರೈಸುತ್ತದೆ. ಅರ್ಜಿದಾರ ಸಂಸ್ಥೆಯು ಪ್ರಚಾರ ಯೋಜನೆಯ ಭಾಗವಾಗಿ ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹದ ಭಾಗವಾಗಿ ವೋಚರ್ಗಳನ್ನು ನೀಡುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ವೋಚರ್ಗಳನ್ನು ‘ಪಾವತಿ ಸಾಧನʼ ಎಂದು ಪರಿಗಣಿಸಿದೆ. ಸರಕು ಮತ್ತು ಸೇವಾ ಪೂರೈಕೆಯು ಅದನ್ನು ಪರಿಗಣಿಸಬಹುದು ಎಂದು ಹೇಳಿದೆ. ಜಿಎಸ್ಟಿ ವಿಧಿಸಲು ವೋಚರ್ಗಳನ್ನೇ ಸರಕು ಮತ್ತು ಸೇವೆಗಳು ಎಂದು ಪರಿಗಣಿಸಲಾಗದು ಎಂದು ಸೇಲ್ಸ್ ಪ್ರಮೋಷನ್ ಸಂಸ್ಥೆ ವಾದಿಸಿತ್ತು.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ(ಸಿಜಿಎಸ್ಟಿ ಕಾಯಿದೆ) ಸೆಕ್ಷನ್ 12(5)ರ ಅಡಿ ಅರ್ಜಿದಾರ ಸಂಸ್ಥೆಯು ಪೂರೈಸುವ ವೋಚರ್ಗಳನ್ನು ಸರಕು ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ ಎಂದು ಕರ್ನಾಟಕ ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರವು (ಎಎಆರ್) ಆದೇಶಿಸಿತ್ತು. ಇದನ್ನು ಅರ್ಜಿದಾರ ಸಂಸ್ಥೆಯು ಕರ್ನಾಟಕ ಅಡ್ವಾನ್ಸ್ ರೂಲಿಂಗ್ನ ಮೇಲ್ಮನವಿ ಪ್ರಾಧಿಕಾರದಲ್ಲಿ (ಎಎಎಆರ್) ಪ್ರಶ್ನಿಸಲಾಗಿತ್ತು. ಎಎಎಆರ್ ಅದನ್ನು ಎತ್ತಿ ಹಿಡಿದಿತ್ತು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.