ಮದ್ಯ ಖರೀದಿ-ಮಾರಾಟಕ್ಕೆ ವಯೋಮಿತಿಯಲ್ಲಿ ಯಥಾಸ್ಥಿತಿ: ಸಚಿವ ಕೆ.ಗೋಪಾಲಯ್ಯ
ಬೆಂಗಳೂರು, ಫೆ.23: ಮದ್ಯ ಖರೀದಿ ಮತ್ತು ಮಾರಾಟಕ್ಕೆ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ನಿಗದಿಪಡಿಸಿದ್ದ ಹಿನ್ನೆಲೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದ್ದು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಮದ್ಯ ಖರೀದಿ ಮತ್ತು ಮಾರಾಟಕ್ಕೆ ವಯೋಮಿತಿ ಇಳಿಕೆ ಸಂಬಂಧ ಯಶವಂತ್ ನೇತೃತ್ವದ ಸಮಿತಿ ರಚಿಸಿ ಈಗ ಯಥಾಸ್ಥಿತಿ ವಯೋಮಾನವನ್ನು ಕಾಪಾಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನರು ಕುಡಿತದ ಚಟಕ್ಕೆ ಬಿದ್ದಿರುವುದರಿಂದ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿರುವ ವಿಷಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಪ್ರಸಕ್ತ ವರ್ಷ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ರಾಜ್ಯಸ್ವ ಸಂಗ್ರಹ ಗುರಿ ತಲುಪಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ವರ್ಷದ ಜನವರಿ ಅಂತ್ಯದ ವೇಳೆಗೆ 24,724 ಕೋಟಿ ರೂ. ರಾಜ್ಯಸ್ವ ಸಂಗ್ರಹ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.