ಸಿದ್ದರಾಮಯ್ಯ ಕೆಲವೇ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್
''ಬಂಡೆ ಒಡೆದು ಹೋಗಲಿದೆ, ಬಿಜೆಪಿಯ ಕಮಲ ಅರಳಲಿದೆ''
ಬೆಂಗಳೂರು, ಫೆ.25: ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದ ನ್ಯಾ.ಕೆಂಪಣ್ಣ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸದನದಲ್ಲಿ ಮಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಲವೆ ದಿನಗಳಲ್ಲಿ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಐದು ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅವಧಿಯಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿತ್ತು. ರೌಡಿರಾಜ್ಯ ಇತ್ತು ಎಂದು ಆರೋಪಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಗೆಲ್ಲಿಸಲು ಮತ್ತು ಕಾಂಗ್ರೆಸ್ ಸೋಲಿಸಲು ಕರೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು. ಸಿದ್ದರಾಮಯ್ಯ ಹೇಳಿದ್ದೆಲ್ಲ ನಡೆಯುತ್ತೆ. ಆದುದರಿಂದ, ಬಿಜೆಪಿಗೆ ಗೆಲುವು ಖಚಿತ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮತ್ತೆ ಬಿಜೆಪಿ ಆಡಳಿತ ಬರಲಿದೆ. ಹುಲಿಯಾ ಕಾಡಿಗೆ ಹೋಗಲಿದೆ. ಬಂಡೆ ಒಡೆದು ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆ ಎಂದು ಕಟೀಲ್ ತಿಳಿಸಿದರು.
ಇದನ್ನೂ ಓದಿ: ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಏಕೆಂದರೆ...: ಎಚ್. ವಿಶ್ವನಾಥ್ ಹೇಳಿದ್ದೇನು?