ಚಿಂತೆ ಮಾಡಬೇಡಿ, ನಾನೇ ಮುಂದಿನ ಮುಖ್ಯಮಂತ್ರಿ ಎಂದ ಬಸವರಾಜ ಬೊಮ್ಮಾಯಿ
ಬಾಗಲಕೋಟೆ: 'ಚಿಂತೆ ಮಾಡಬೇಡಿ, ನಾನೇ ಮುಂದಿನ ಮುಖ್ಯಮಂತ್ರಿಯಾಗಿ ಮತ್ತೆ ಬೀಳಗಿಗೆ ಬರುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಮುಧೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
''ಮುಧೋಳದ ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ, ಮುರುಗೇಶ್ ನಿರಾಣಿ ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನನಗೆ ಗೊತ್ತಾಗಬಹುದು ಎಂದು ಅವರು ಕರೆದೊಯ್ದಿಲ್ಲ. ಚಿಂತೆ ಮಾಡಬೇಡಿ, ನಾನು ಮತ್ತೆ ಮುಖ್ಯಮಂತ್ರಿಯಾಗಿ ಬೀಳಗಿಗೆ ಬರುತ್ತೇನೆ'' ಎಂದು ನಗುನಗುತ್ತಲೇ ನಿರಾಣಿಯತ್ತ ನೋಡುತ್ತಾ ಹೇಳಿದರು.
'ಹುನಗುಂದ ಮತ್ತು ಮುಧೋಳದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 1600 ಕೋಟಿ ರೂ.ಅಭಿವೃದ್ಧಿ ಮಾಡಲಾಗುತ್ತಿದೆ. ಮೂರು ವರ್ಷಗಳ ಸರಕಾರದ ನಿರ್ಣಯ, ಬಿಡುಗಡೆ ಮಾಡಿರುವ ಅನುದಾನ ಮತ್ತು ಅನುಷ್ಠಾನದ ಫಲವಾಗಿ ಇದಾಗುತ್ತಿದೆ. ನಮ್ಮ ಕೆಲಸಗಳು ಮಾತನಾಡಬೇಕು' ಎಂದು ತಿಳಿಸಿದರು.