15 ದಿನದಲ್ಲೇ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಶುಲ್ಕ ಹೆಚ್ಚಳ: ಎಪ್ರಿಲ್ 1 ರಿಂದ ಜಾರಿ
ಬೆಂಗಳೂರು,ಮಾ.31: ಮಾರ್ಚ್ 14ರಿಂದ ಆರಂಭವಾಗಿದ್ದ ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ದಶಪಥ ರಸ್ತೆಯ ಟೋಲ್ ಶುಲ್ಕವನ್ನು 15 ದಿನಗಳಲ್ಲಿ ಮತ್ತೆ ಹೆಚ್ಚಿಸಲಾಗಿದ್ದು, ನಾಳೆಯಿಂದಲೇ (ಏಪ್ರಿಲ್ 1) ಈ ಪರಿಷ್ಕೃತ ದರ ಜಾರಿಗೆ ಬರಲಿದೆ.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಈ ಹೆದ್ದಾರಿಯನ್ನು ಉದ್ಘಾಟಿಸಿದ್ದು, ಮಾ. 14ರಿಂದ ಟೋಲ್ ಸಂಗ್ರಹ ಆರಂಭಗೊಂಡಿತ್ತು.
ಕಾರು, ಜೀಪು, ವ್ಯಾನು ಗಳ ಏಕಮುಖ ಸಂಚಾರಕ್ಕೆ 135 ರೂ.ಗಳಿಂದ 165 ರೂ.ಗಳಿಗೆ ಹೆಚ್ಚಿಸಲಾಗಿದೆ.ಇವುಗಳ, ದ್ವಿಮುಖ ಸಂಚಾರಕ್ಕೆ ಇದ್ದ ಶುಲ್ಕವನ್ನು 205 ರೂ.ಗಳಿಂದ 250 ರೂ.ಗಳಿಗೆ ಏರಿಸಲಾಗಿದೆ.
ಲಘು ವಾಹನಗಳು, ಮಿನಿ ಬಸ್ಗಳ ಏಕಮುಖ ಟೋಲ್ ರೂ. 220ರಿಂದ ರೂ. 270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ರೂ. 405 (ರೂ. 75 ಹೆಚ್ಚಳ) ನಿಗದಿ ಮಾಡಲಾಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ರೂ. 565ಕ್ಕೆ ಏರಿಕೆ ಆಗಿದ್ದು (ರೂ.105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ರೂ.850 ನಿಗದಿಪಡಿಸಲಾಗಿದೆ (ರೂ. 160 ಹೆಚ್ಚಳ).
3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ರೂ.615 (ರೂ.115 ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ ರೂ.925 (ರೂ.225 ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ ರೂ.885 (ರೂ.165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ ರೂ.1,330 (ರೂ.250 ಹೆಚ್ಚಳ) ನಿಗದಿ ಆಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ರೂ.1,080 (ರೂ.200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ರೂ.1,620 (ರೂ.305 ಏರಿಕೆ) ನಿಗದಿ ಆಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಟೋಲ್ ಸಂಗ್ರಹ ಆರಂಭವಾದ 15 ದಿನದಲ್ಲೇ ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿದ್ದು, ಟೋಲ್ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡುತ್ತಿದೆ.
ಟೋಲ್ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.