ಶೆಟ್ಟರ್ ಗೆ ಐಟಿ ದಾಳಿಯ ಬೆದರಿಕೆ ಹಾಕಿದ್ದ ಜೋಶಿ: ರಮೇಶ್ ಬಾಬು ಆರೋಪ
ಬೆಂಗಳೂರು, ಎ.18: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಆಶ್ರಯದಲ್ಲಿ ರಾಜಕೀಯ ಆರಂಭಿಸಿದ ಪ್ರಹ್ಲಾದ್ ಜೋಶಿ ತಮ್ಮ ಅಧಿಕಾರದ ದರ್ಪದಿಂದ ಎರಡು ದಿನಗಳ ಹಿಂದೆ ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನದ ವೇಳೆ ಐಟಿ ದಾಳಿಯ ಬೆದರಿಕೆ ಹಾಕಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಜೋಶಿ, ಜಗದೀಶ್ ಶೆಟ್ಟರ್ ಗೆ ನೀವು ಬಿಜೆಪಿ ತೊರೆದರೆ ಮುಂದಿನ ದಿನಗಳಲ್ಲಿ ಐಟಿ, ಇಡಿ, ಸಿಬಿಐ ಕ್ರಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾರೆ. ಆದರೆ, ಮೂಲತಃ ಶೆಟ್ಟರ್ ವಕೀಲರಾಗಿದ್ದು, ಅವರು ಜೋಶಿ ಅವರಿಗೆ ತಾವು ವಕೀಲರು ನಿಮ್ಮ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿ ಬಿಜೆಪಿ ಬಿಡುವ ದೃಢ ನಿರ್ಧಾರಕ್ಕೆ ಬಂದರು. ಅವರು ತಮ್ಮ ಸ್ವಾಭಿಮಾನ ಹಾಗೂ ರಾಜಕೀಯ ಇಚ್ಛಾಶಕ್ತಿಗಾಗಿ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆಯಾಗಿದ್ದಾರೆ ಎಂದರು.
ರಾಜ್ಯ ಕಂಡಿರುವ ಕೆಲವೇ ಸಜ್ಜನ ರಾಜಕಾರಣಿಗಳಲ್ಲಿ ಜಗದೀಶ್ ಶೆಟ್ಟರ್ ಒಬ್ಬರು. ಬಹಳ ಪ್ರಾಮಾಣಿಕವಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂದು ಅವರ ಸ್ವಾಭಿಮಾನಕ್ಕೆ ಆಗಿರುವ ಧಕ್ಕೆ, ರಾಜಕೀಯ ಜೀವನಕ್ಕೆ ಆಗಿರುವ ಪೆಟ್ಟಿನಿಂದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ರಮೇಶ್ ಬಾಬು ತಿಳಿಸಿದರು.