ವಿಧಾನಸಭಾ ಚುನಾವಣೆ: ಮತ ಹಾಕಿ ಬ್ಯಾಲೆಟ್ ಪೇಪರ್ ಪ್ರದರ್ಶಿಸಿದ ಯೋಧನ ಫೋಟೋ ವೈರಲ್
ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪೋಸ್ಟಲ್ ನಲ್ಲಿ ಮತ ಹಾಕಿದ ಯೋದನೊಬ್ಬ ಮತ ಹಾಕಿದ ಬ್ಯಾಲೆಟ್ ಪೇಪರ್ ಜೊತೆಗೆ ಫೋಟೊ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸರ್ಕಾರಿ ನೌಕರರಿಗೆ ಅವರು ಇರುವ ಕಡೆಯಿಂದಲೇ ಪೋಸ್ಟಲ್ ನಲ್ಲಿ ಮತಹಾಕಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿ ಬ್ಯಾಲೆಟ್ ನಲ್ಲಿ ಮತದಾನ ಆರಂಭಿಸಿದೆ. ಆದರೆ ಯೋಧನೋರ್ವ ತಾನು ಮತದಾನ ಮಾಡಿ ಅದರ ಬ್ಯಾಲೆಟ್ ಪೇಪರ್ ಜೊತೆ ಫೋಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಈ ಫೋಟೊ ಇದೀಗ ವ್ಯಾಪಕ ವೈರಲ್ ಆಗಿದೆ.
ಈ ಫೋಟೊ ಅಪ್ಲೋಡ್ ಮಾಡಿ ಅದರ ಜೊತೆಗೆ, 'ನಮ್ಮ ಸಾ.ರಾ. ಬಾಸ್ ಗೆ ಮೊದಲ ಮತ. ನಮ್ಮ ದೇಶ ಕಾಯುವ ಸೈನಿಕನಿಂದ ಜೈ ಹಿಂದ್' ಎಂಬ ಅಡಿಬರಹವಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಯೋಧ ಕೆ.ಆರ್.ನಗರ ಕ್ಷೇತ್ರದ ಮತದಾರ ಎಂಬುದು ಪೋಸ್ಟ್ ನಿಂದ ತಿಳಿದು ಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಮತದಾನ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದನ್ನು ಚುನಾವಣಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.