ಕೊಪ್ಪಳ: ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಮೃತ್ಯು

ಕೊಪ್ಪಳ, ಮೇ 28: ಲಾರಿ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಮಕ್ಕಳು ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ರವಿವಾರ ವರದಿಯಾಗಿದೆ. ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಮೃತರನ್ನು ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ, ರಶ್ಮಿಕಾ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕಾರಿನಲ್ಲಿ ವಿಜಯಪುರಿಂದ ಬೆಂಗಳೂರಿಗೆ ಹೊರಟಿದ್ದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರಿನ ಟೈರ್ ಸ್ಫೋಟಿಸಿದೆ. ಪರಿಣಾಮ ಇನ್ನೊಂದು ಬದಿಯ ರಸ್ತೆಗೆ ಬಂದು ಲಾರಿಗೆ ಕಾರು ಢಿಕ್ಕಿ ಹೊಡೆದಿದೆ. ಲಾರಿ ವೇಗವಾಗಿ ಚಲಿಸುತ್ತಿದ್ದರಿಂದ ಕಾರು ಸಂಪೂರ್ಣ ಲಾರಿಯ ಕೆಳಗಡೆ ನುಸುಳಿದೆ. ಕಾರಿನಿಂದ ಮೃತದೇಹಗಳನ್ನು ಹೊರಗಡೆ ತೆಗೆಯಲು ಸ್ಥಳಿಯರು ಹರಸಾಹಸ ಪಡಬೇಕಾಯಿತು. ಅಲ್ಲದೇ, ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





