ಎರಡನೆ ಟ್ವೆಂಟಿ-20 ಪಂದ್ಯಕ್ಕೆ 5 ಕೋ.ರೂ. ವಿಮೆ!
ರಾಜ್ಕೋಟ್, ನ.3: ಭಾರತ ಹಾಗೂ ನ್ಯೂಝಿಲೆಂಡ್ನ ನಡುವೆ ನ.4 ರಂದು ನಡೆಯಲಿರುವ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಸ್ಸಿಎ)5 ಕೋ.ರೂ. ವಿಮೆ ಮಾಡಿದೆ.
‘‘ಪಂದ್ಯಕ್ಕೆ ಸಂಬಂಧಿಸಿ ಎಲ್ಲ ವ್ಯವಸ್ಥೆ ಪೂರ್ಣಗೊಂಡಿದೆ. 28,000 ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂ ಹೌಸ್ಫುಲ್ ಆಗುವ ಸಾಧ್ಯತೆಯಿದೆ. ಪಂದ್ಯಕ್ಕೆ 5 ಕೋಟಿ ರೂ. ವಿಮೆ ಮಾಡಿಸಲಾಗಿದೆ’’ ಎಂದು ಎಸ್ಸಿಎ ಮೀಡಿಯ ಮ್ಯಾನೇಜರ್ ಹಿಮಾಂಶು ಶಾ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.
ಎಸ್ಸಿಎ ಸ್ಟೇಡಿಯಂ ಎರಡನೆ ಬಾರಿ ಟ್ವೆಂಟಿ-20 ಇಂಟರ್ನ್ಯಾಶನಲ್ ಪಂದ್ಯದ ಆತಿಥ್ಯವಹಿಸಿಕೊಂಡಿದೆ. 2013ರ ಅಕ್ಟೋಬರ್ 10 ರಂದು ಭಾರತ-ಆಸ್ಟ್ರೇಲಿಯ ನಡುವೆ ಇಲ್ಲಿ ಟ್ವೆಂಟಿ-20 ಪಂದ್ಯ ನಡೆದಿತ್ತು. ಆ ಪಂದ್ಯವನ್ನು ಭಾರತಕ್ಕೆ 6 ವಿಕೆಟ್ಗಳ ಅಂತರದಿಂದ ಜಯಿಸಿತ್ತು.
‘‘ಉಭಯ ತಂಡಗಳು ಎರಡು ಪ್ರತ್ಯೇಕ ವಿಮಾನಗಳಲ್ಲಿ ಆಗಮಿಸಿವೆ. ಶುಕ್ರವಾರ ಬೆಳಗ್ಗೆ ನ್ಯೂಝಿಲೆಂಡ್ ಪ್ರಾಕ್ಟೀಸ್ ನಡೆಸಲಿದೆ. ಭಾರತ ಮಧ್ಯಾಹ್ನ ಅಭ್ಯಾಸ ನಡೆಸಲಿದೆ’’ ಎಂದು ಶಾ ತಿಳಿಸಿದ್ದಾರೆ.
ಭಾರತ ಹೊಸದಿಲ್ಲಿಯಲ್ಲಿ ನಡೆದಿದ್ದ 3 ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯವನ್ನು 53 ರನ್ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.