ಗೆಲುವಿನೊಂದಿಗೆ ಭಾರತದ ಅಭಿಯಾನ ಅಂತ್ಯ
ಎಎಫ್ಸಿ ಅಂಡರ್-19 ಕ್ವಾಲಿಫೈಯರ್
ದಮ್ಮಾಮ್(ಸೌದಿ ಅರೇಬಿಯ), ನ.8: ಎಎಫ್ಸಿ ಅಂಡರ್-19 ಫುಟ್ಬಾಲ್ ಚಾಂಪಿಯನ್ಶಿಪ್ನ ಕ್ವಾಲಿಫೈಯರ್ನ ‘ಡಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ ತುರ್ಕ್ಮೆನಿಸ್ತಾನ್ ತಂಡವನ್ನು 3-0 ಅಂತರದಿಂದ ಮಣಿಸಿತು.
ಈ ಮೂಲಕ ಭಾರತ ಚಾಂಪಿಯನ್ಶಿಪ್ ಅಭಿಯಾನವನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು. ಭಾರತದ ಪರ ನಾಯಕ ಅಮರ್ಜಿತ್ ಸಿಂಗ್ 74ನೆ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಅಭಿಷೇಕ್ ಹಲ್ದರ್ 80ನೆ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. 92ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಭಾರತ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ್ದಲ್ಲದೆ 3-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಪ್ರಿನ್ಸ್ ಮುಹಮ್ಮದ್ ಬಿನ್ ಫಹಾದ್ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ‘ಇಂಡಿಯಾ’, ‘ಇಂಡಿಯಾ’ ಎಂದು ಘೋಷಣೆ ಕೂಗಿ ತಂಡವನ್ನು ಹುರಿದುಂಬಿಸಿದರು. ಭಾರತ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. 3 ಪಂದ್ಯಗಳಲ್ಲಿ 4 ಅಂಕ ಗಳಿಸಿದ ಭಾರತ ಕ್ವಾಲಿಫೈಯರ್ ಸುತ್ತನ್ನು ಕೊನೆಗೊಳಿಸಿತು. ಭಾರತ ತಂಡ ಆತಿಥೇಯ ಸೌದಿ ಅರೇಬಿಯ ವಿರುದ್ಧದ ಮೊದಲ ಪಂದ್ಯವನ್ನು ಸೋತಿತ್ತು. ಆದರೆ, ಯೆಮೆನ್ ವಿರುದ್ಧದ ಎರಡನೆ ಪಂದ್ಯವನ್ನು ಡ್ರಾಗೊಳಿಸಿತ್ತು.