ಶ್ರೀಕಾಂತ್ಗೆ ಸತತ ಸೋಲು, ಸಿಂಧು ಸೆಮಿಫೈನಲ್ಗೆ
ದುಬೈ ವರ್ಲ್ಡ್ಸೂಪರ್ ಸರಣಿ
ದುಬೈ, ಡಿ.14: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ದುಬೈ ವರ್ಲ್ಡ್ಸೂಪರ್ ಸರಣಿ ಫೈನಲ್ಸ್ನಲ್ಲಿ ಸತತ ಎರಡನೇ ಸೋಲು ಕಂಡಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ವಿಶ್ವದ ನಂ.4 ಆಟಗಾರ ಶ್ರೀಕಾಂತ್ ಗುರುವಾರ ನಡೆದ ಪುರುಷರ ಸಿಂಗಲ್ಸ್ನ ‘ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಚೈನೀಸ್ ತೈಪೆಯ ಎದುರಾಳಿ ಚೌ ಟಿಯನ್-ಚೆನ್ ವಿರುದ್ಧ 18-21, 18-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಶ್ರೀಕಾಂತ್ ಮೊದಲ ಗೇಮ್ನ ಅಂತ್ಯದಲ್ಲಿ ಹಾಗೂ ಎರಡನೇ ಗೇಮ್ ಉದ್ದಕ್ಕೂ ಉತ್ತಮ ಹೋರಾಟ ನೀಡಿದ್ದರು. ಆದರೆ ಚೈನೀಸ್ ತೈಪೆಯ ಆಟಗಾರ ಶ್ರೀಕಾಂತ್ಗೆ ತಿರುಗೇಟು ನೀಡಲು ಯಶಸ್ವಿಯಾಗಿ ಕೇವಲ 43 ನಿಮಿಷಗಳಲ್ಲಿ ಪಂದ್ಯವನ್ನು 21-18,21-18 ಅಂತರದಿಂದ ಗೆದ್ದುಕೊಂಡರು.
ಹೈದರಾಬಾದ್ ಆಟಗಾರ ಶ್ರೀಕಾಂತ್ ಶುಕ್ರವಾರ ‘ಬಿ’ ಗುಂಪಿನಲ್ಲಿ ಮೂರನೇ ಹಾಗೂ ಕೊನೆಯ ಪಂದ್ಯ ಆಡಲಿದ್ದಾರೆ. ‘ಬಿ’ ಗುಂಪಿನಲ್ಲಿ ಸತತ 2 ಪಂದ್ಯಗಳಲ್ಲಿ ಜಯ ಸಾಧಿಸಿ ಅಗ್ರ ಸ್ಥಾನದಲ್ಲಿರುವ ಶಿ ಯೂಖಿ ಅವರನ್ನು ಎದುರಿಸಲಿದ್ದಾರೆ.
ಸತತ ಜಯ ಸಾಧಿಸಿರುವ ಯೂಖಿ ಸೆಮಿ ಫೈನಲ್ ಸ್ಥಾನ ದೃಢಪಡಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ ಹಾಗೂ ಚೌ ಟಿಯೆನ್-ಚೆನ್ ನಡುವೆ ನಡೆಯಲಿರುವ ಮುಂದಿನ ಪಂದ್ಯ ‘ಬಿ’ ಗುಂಪಿನಲ್ಲಿ ಎರಡನೇ ಸೆಮಿಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.
ಶ್ರೀಕಾಂತ್ ಬುಧವಾರ ನಡೆದ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ಅಕ್ಸೆಲ್ಸನ್ ವಿರುದ್ಧ 13-21, 17-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. ಈ ಪಂದ್ಯ ಕೇವಲ 38 ನಿಮಿಷಗಳಲ್ಲಿ ಕೊನೆಗೊಂಡಿತ್ತು.