ಫೆಡರರ್, ಹಾಲೆಪ್ ಕ್ವಾರ್ಟರ್ ಫೈನಲ್ಗೆ
ಇಂಡಿಯನ್ ವೆಲ್ಸ್
ಇಂಡಿಯನ್ ವೆಲ್ಸ್, ಮಾ.15: ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ ಹಾಗೂ ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. 36ರ ಹರೆಯದ ಫೆಡರರ್ ಬುಧವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಬ್ರಿಟನ್ನ ಜೆರೆಮಿ ಚಾರ್ಡಿ ಅವರನ್ನು 7-5, 6-4 ಸೆಟ್ಗಳ ಅಂತರದಿಂದ ಮಣಿಸಿದರು. ಹಾಲಿ ಚಾಂಪಿಯನ್ ಫೆಡರರ್ ಕ್ವಾರ್ಟರ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಚುಂಗ್ ಹಿಯೊನ್ರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಚುಂಗ್ 30ನೇ ಶ್ರೇಯಾಂಕದ ಉರುಗ್ವೆ ಆಟಗಾರ ಪಾಬ್ಲೊ ಕುವಾಸ್ರನ್ನು 6-1, 6-3 ನೇರ ಸೆಟ್ಗಳಿಂದ ಮಣಿಸಿದರು.
2 ಗಂಟೆ, 23 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಹಾಲೆಪ್ ಕ್ರೊಯೇಷಿಯದ ಪೆಟ್ರಾ ಮಾರ್ಟಿಕ್ರನ್ನು 6-4, 6-7(5/7), 6-3 ಸೆಟ್ಗಳ ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಜಪಾನ್ನ ನಯೊಮಿ ಒಸಾಕಾರನ್ನು ಎದುರಿಸಲಿರುವ ಹಾಲೆಪ್ ಈ ವರ್ಷ ಎರಡನೇ ಡಬ್ಲುಟಿಎ ಟೂರ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಒಸಾಕಾ ಮತ್ತೊಂದು ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾರನ್ನು 6-2, 6-3 ಅಂತರದಿಂದ ಸೋಲಿಸಿದ್ದಾರೆ.