ಸ್ಟೆಫನ್ಸ್, ಹಾಲೆಪ್ ಪ್ರಿ-ಕ್ವಾರ್ಟರ್ ಪೈನಲ್ಗೆ
ಪ್ಯಾರಿಸ್, ಜೂ.2: ಅಮೆರಿಕನ್ ಓಪನ್ ಚಾಂಪಿಯನ್ ಸ್ಲೋಯೆನ್ ಸ್ಟೆಫನ್ಸ್ ಫ್ರೆಂಚ್ ಓಪನ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ 10ನೇ ಶ್ರೇಯಾಂಕದ ಆಟಗಾರ್ತಿ ಸ್ಟೆಫನ್ಸ್ ಇಟಲಿಯ ಕಾಮಿಲಾ ಗಿಯೊರ್ಗಿ ಅವರನ್ನು 4-6, 6-1, 8-6 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ. ಸ್ಟೆಫನ್ಸ್ ಮುಂದಿನ ಸುತ್ತಿನಲ್ಲಿ ಝೆಕ್ನ ಪೆಟ್ರಾ ಕ್ವಿಟೋವಾಗೆ ಸೋಲುಣಿಸಿರುವ ಇಸ್ಟೋನಿಯದ ಅನೆಟ್ಟ್ ಕಾಂಟವೆಟ್ರನ್ನು ಎದುರಿಸಲಿದ್ದಾರೆ.
►ಹಾಲೆಪ್ ಪ್ರಿ-ಕ್ವಾರ್ಟರ್ಗೆ
ಅಗ್ರ ಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಾಲೆಪ್ ಜರ್ಮನಿಯ ಆ್ಯಂಡ್ರಿಯ ಪೆಟ್ಕೋವಿಕ್ರನ್ನು 7-5, 6-0 ಅಂತರದಿಂದ ಸೋಲಿಸುವುದರೊಂದಿಗೆ ಫ್ರೆಂಚ್ ಓಪನ್ನ ಮಹಿಳೆಯರ ಸಿಂಗಲ್ಸ್ ನಲ್ಲಿ ನಾಲ್ಕನೇ ಸುತ್ತಿಗೆ ತಲುಪಿದ್ದಾರೆ.
2014ರ ಸೆಮಿಫೈನಲಿಸ್ಟ್ ಪೆಟ್ಕೋವಿಕ್ರನ್ನು ಸೋಲಿಸಿದ ರೊಮಾನಿಯ ಆಟಗಾರ್ತಿ ಮುಂದಿನ ಸುತ್ತಿನಲ್ಲಿ 16ನೇ ಶ್ರೇಯಾಂಕದ ಆಟಗಾರ್ತಿ ಎಲಿಸ್ ಮಾರ್ಟೆನ್ಸ್ರನ್ನು ಎದುರಿಸಲಿದ್ದಾರೆ.
Next Story