ಮಮೆದ್ಯರೊವ್ರನ್ನು ಮಣಿಸಿದ ಆನಂದ್
ಟಾಟಾ ಸ್ಟೀಲ್ ಚೆಸ್
ವಿಜ್ಕಾನ್ಝೀ (ನೆದರ್ಲೆಂಡ್),ಜ.21: ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವವಿಜೇತ ವಿಶ್ವನಾಥನ್ ಆನಂದ್ ಅಝರ್ಬೈಜಾನ್ನ ಶಕ್ರಿಯಾರ್ ಮಮೆದ್ಯರೊವ್ ಅವರನ್ನು ಎಂಟನೇ ಸುತ್ತಿನಲ್ಲಿ ಮಣಿಸುವ ಮೂಲಕ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಜೊತೆ ಮುನ್ನಡೆಯನ್ನು ಸಾಧಿಸಿದರು. ಹಿಂದಿನ ಪಂದ್ಯದಲ್ಲಿ ರಶ್ಯದ ವ್ಲಾಡಿಮಿರ್ ಕ್ರಮ್ನಿಕ್ ಅವರಿಗೆ ಸೋಲುಣಿಸಿದ್ದ ಆನಂದ್ ಆಟದ ಮೇಲೆ ತನ್ನ ಅಧಿಪತ್ಯವನ್ನು ಮುಂದುವರಿಸಿದ್ದು ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ಮಮೆದ್ಯರೊವ್ ಅವರಿಗೂ ಸೋಲಿನ ಮುಖ ತೋರಿಸಿದರು. ಎಂಟು ಅಂಕಗಳಲ್ಲಿ 5.5 ಅಂಕಗಳನ್ನು ತನ್ನದಾಗಿಸಿಕೊಂಡಿರುವ ಭಾರತದ ಚೆಸ್ ಮಾಂತ್ರಿಕ ಸದ್ಯ ವಿಶ್ವ ಚಾಂಪಿಯನ್ ಕಾರ್ಲ್ಸನ್ ಅವರೊಂದಿಗೆ ಮುನ್ನಡೆಯನ್ನು ಸಾಧಿಸಿದ್ದಾರೆ. ಕಳೆದ ಎರಡು ದಶಕಗಳಿಂದ ವಿಜ್ಕಾನ್ಝೀ ಆನಂದ್ರ ಅಚ್ಚುಮೆಚ್ಚಿನ ಆಟದ ಸ್ಥಳವಾಗಿದ್ದು ಇಲ್ಲಿಂದಲೇ ಮತ್ತೆ ಅಗ್ರಶ್ರೇಯಾಂಕದತ್ತ ದಾಪುಗಾಲಿಡುವ ಲಕ್ಷಣಗಳು ಕಾಣುತ್ತಿವೆ.
Next Story