ಸೌರಭ್ ವರ್ಮಾ, ಉತ್ತೇಜಿತಾ ರಾವ್ ಪ್ರಧಾನ ಸುತ್ತಿಗೆ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಬಾಂಕಾಕ್, ಜು.30: ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೌರಭ್ ವರ್ಮಾ ಮತ್ತು ಉತ್ತೇಜಿತಾ ರಾವ್ ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಧಾನ ಸುತ್ತು ತಲುಪಿದ್ದಾರೆ.
ಮಂಗಳವಾರ ನಡೆದ ಅರ್ಹತಾ ಸುತ್ತಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸೌರಭ್ ಥಾಯ್ಲೆಂಡ್ನ ಕಾಂಟಾವಾಟ್ ಲೇಲಾವೆಚಾಬುಟ್ರಾರನ್ನು 21-18, 21-19 ಗೇಮ್ಗಳ ಅಂತರದಲ್ಲಿ ಸೋಲಿಸಿದರು. ಎರಡನೇ ಪಂದ್ಯದಲ್ಲಿ ಚೀನಾದ ಝೌ ಝೆ ಕಿ ವಿರುದ್ಧ 11-21, 21-14, 21-18 ಅಂತರದಲ್ಲಿ ಜಯ ಗಳಿಸಿದ ಸೌರಭ್ ಪ್ರಧಾನ ಸುತ್ತಿಗೆ ತೇರ್ಗಡೆಯಾದರು.
ಝೌ ಅವರು ಭಾರತದ ಅಜಯ್ ಜಯರಾಮ್ಗೆ 21-16, 21-13 ಅಂತರದಲ್ಲಿ ಸೋಲುಣಿ ಸಿದರು.
ಇದೇ ವೇಳೆ ಉತ್ತೇಜಿತಾ ರಾವ್ ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ ಕೆನಡಾದ ಟಾಮ್ ಬ್ರೀಟ್ನೇ ವಿರುದ್ಧ 16-21, 21-14, 21-19 ಗೇಮ್ಗಳ ಅಂತರದಲ್ಲಿ ಜಯ ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡರು.
ಮಹಿಳೆಯರ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್, ಪುರುಷರ ಸಿಂಗಲ್ಸ್ನಲ್ಲಿ ಬಿ. ಸಾಯಿ ಪ್ರಣೀತ್, ಕೆ.ಶ್ರೀಕಾಂತ್, ಎಚ್.ಎಸ್.ಪ್ರಣಯ್ ಮತ್ತು ಪಿ.ಕಶ್ಯಪ್ ಸ್ಪರ್ಧಾ ಕಣದಲ್ಲಿದ್ದಾರೆ. ಪ್ರಥಮ ಸುತ್ತಿನ ಪಂದ್ಯಗಳು ಬುಧವಾರ ಆರಂಭವಾಗಲಿವೆ.