ಜೀತ್ ರಾವಲ್ ಬದಲಿಗೆ ಟಾಮ್ ಬ್ಲಂಡೆಲ್
ಹ್ಯಾಮಿಲ್ಟನ್,ಡಿ.22: ಆಸ್ಟ್ರೇಲಿಯ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ನ ಫಾರ್ಮ್ನಲ್ಲಿಲ್ಲದ ಅಗ್ರ ಸರದಿಯ ಬ್ಯಾಟ್ಸ್ಮನ್ ಜೀತ್ ರಾವಲ್ರಿಂದ ತೆರವಾದ ಸ್ಥಾನವನ್ನು ಮೀಸಲು ಬ್ಯಾಟ್ಸ್ಮನ್ ಟಾಮ್ ಬ್ಲಂಡಲ್ ತುಂಬಲು ಸಜ್ಜಾಗಿದ್ದಾರೆ. ಬ್ಲಂಡೆಲ್ ಅವರು ವಿಕ್ಟೋರಿಯಾ ಸ್ಟೇಟ್ ಇಲೆವೆನ್ ವಿರುದ್ಧ ರವಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ನ ಇನಿಂಗ್ಸ್ ಆರಂಭಿಸಿದ್ದು ಔಟಾಗದೆ ಅರ್ಧಶತಕ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ಮೂಲದ ರಾವಲ್ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಆರಂಭಿಕ ಪಂದ್ಯದ ಎರಡೂ ಇನಿಂಗ್ಸ್ನಲ್ಲಿ ವೈಫಲ್ಯ ಕಂಡಿದ್ದರು. ಟಾಮ್ ಬ್ಲಂಡಲ್ ಡಿ.26ರಂದು ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಆಸ್ಟ್ರೇಲಿಯದ ಇನಿಂಗ್ಸ್ ಆರಂಭಿಸುವುದು ದೃಢಪಟ್ಟಿದೆ. ನಾನು ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಆಡಲು ಉತ್ಸುಕನಾಗಿದ್ದೇನೆ.ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಬಯಸಿದ್ದೇನೆ ಎಂದು ಬ್ಲಂಡಲ್ ಹೇಳಿದ್ದಾರೆ.
ಬ್ಲಂಡಲ್ 2017ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಗಾಯಗೊಂಡಿದ್ದ ಖಾಯಂ ವಿಕೆಟ್ಕೀಪರ್ ಜೆಜಿ ವಾಟ್ಲಿಂಗ್ ಬದಲಿಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಮೂರು ಟೆಸ್ಟ್ ಇನಿಂಗ್ಸ್ಗಳಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಬ್ಲಂಡೆಲ್ ವೆಲ್ಲಿಂಗ್ಟನ್ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು.