ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡು ಚಿನ್ನ ಗೆದ್ದ ಚಾನು
ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್
ಕೋಲ್ಕತಾ, ಫೆ.4: ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಮಂಗಳವಾರ ಇಲ್ಲಿ ನಡೆದ 49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 203 ಕೆಜಿ ತೂಕ ಎತ್ತಿ ಹಿಡಿದ 25ರ ಹರೆಯದ ಮಣಿಪುರದ ವೇಟ್ಲಿಫ್ಟರ್ ಚಾನು ಮೊದಲ ಸ್ಥಾನ ಪಡೆಯುವ ಜೊತೆಗೆ ಈ ಹಿಂದೆ ನಿರ್ಮಿಸಿರುವ ತನ್ನದೇ ರಾಷ್ಟ್ರೀಯ ದಾಖಲೆಗಿಂತ ಎರಡು ಕೆಜಿ ಹೆಚ್ಚು ಭಾರ ಎತ್ತಿ ಹಿಡಿದರು.
ಚಾನು ತನ್ನ ಎರಡನೇ ಪ್ರಯತ್ನದಲ್ಲಿ ಸ್ನಾಚ್ನಲ್ಲಿ 88 ಕೆಜಿ ಹಾಗೂ ಕ್ಲೀನ್ ಹಾಗೂ ಜರ್ಕ್ನಲ್ಲಿ 115 ಕೆಜಿ ಸಹಿತ ಒಟ್ಟು 203 ಕೆಜಿ ಭಾರ ಎತ್ತಿ ಹಿಡಿದರು.
ಇದೀಗ ಚಾನು ವಿಶ್ವ ರ್ಯಾಂಕಿಂಗ್ನಲ್ಲಿ ಚೀನಾದ ಜಿಯಾಂಗ್ ಹ್ಯುವಾ(212 ಕೆಜಿ) ಹಾಗೂ ಹೊವು ಝಿಹುಯ್(211ಕೆಜಿ) ಹಾಗೂ ಕೊರಿಯಾದ ರಿ ಸಾಂಗ್ ಗಮ್(209 ಕೆಜಿ)ಬಳಿಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೀರಾಬಾಯಿ ಕಳೆದ ವರ್ಷ ಸೆಪ್ಟಂಬರ್ನಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ 201 ಕೆಜಿ ಎತ್ತಿ ಹಿಡಿದು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆದರೆ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಾನು ನಾಲ್ಕನೇ ಸ್ಥಾನ ಪಡೆದಿದ್ದರು.