ಸೆಮಿ ಫೈನಲ್ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ
ಸಿಡ್ನಿ, ಮಾ.3: ಮಹಿಳಾ ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಮಳೆಗಾಹುತಿಯಾದ ಹಿನ್ನೆಲೆಯಲ್ಲಿ ಸೆಮಿ ಫೈನಲ್ ಎದುರಾಳಿ ಯಾರೆಂದು ನಿರ್ಧಾರವಾಗಿದೆ. ಮಳೆಯಿಂದಾಗಿ ಪಂದ್ಯ ರದ್ದುಗೊಂಡ ಕಾರಣ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಭಾರತ ಒಟ್ಟು ಏಳು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.
ಗ್ರೂಪ್ ಹಂತದಲ್ಲಿ ಮೂರು ಗೆಲುವು ಹಾಗೂ ಒಂದು ಸೋಲು ಅನುಭವಿಸಿರುವ ಇಂಗ್ಲೆಂಡ್ ಗುರುವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಭಾರತವನ್ನು ಎದುರಿಸಲಿದೆ. 2018ರ ಆವೃತ್ತಿಯಲ್ಲೂ ಈ ಎರಡು ತಂಡಗಳು ಸೆಮಿ ಫೈನಲ್ನಲ್ಲಿ ಸೆಣಸಾಡಿದ್ದವು. ಆಗ ಭಾರತ ತಂಡವನ್ನು ಮಣಿಸಿದ್ದ ಇಂಗ್ಲೆಂಡ್ ಫೈನಲ್ನಲ್ಲಿ ಆಸ್ಟ್ರೇಲಿಯಕ್ಕೆ ಸೋಲುಂಡಿತ್ತು. ಗ್ರೂಪ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಅಜೇಯ ಗೆಲುವಿನ ದಾಖಲೆ ನಿರ್ಮಿಸಿರುವ ಭಾರತ ವಿಶ್ವಕಪ್ನಲ್ಲಿ ಮೊದಲ ಬಾರಿ ಫೈನಲ್ ತಲುಪುವ ಗುರಿ ಹಾಕಿಕೊಂಡಿದೆ. ದಕ್ಷಿಣ ಆಫ್ರಿಕಾ ಹಾಗೂ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯದ ನಡುವೆ ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡನೇ ಸೆಮಿ ಫೈನಲ್ ಪಂದ್ಯ ನಡೆಯಲಿದೆ.