ಜೊಕೊವಿಕ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ವೆಸ್ಟರ್ನ್-ಸದರ್ನ್ ಟೆನಿಸ್ ಓಪನ್ ಟೂರ್ನಮೆಂಟ್
ನ್ಯೂಯಾರ್ಕ್, ಆ.26: ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಜೊಕೊವಿಕ್ ಅಮೆರಿಕದ ಆಟಗಾರ ಟೆನ್ನಿಸ್ ಸ್ಯಾಂಡ್ಗ್ರೆನ್ರನ್ನು 6-2, 6-4 ನೇರ ಸೆಟ್ಗಳಿಂದ ಸೋಲಿಸಿದರು. ಟೂರ್ನಿಯ ಅಂತಿಮ-8ರ ಸುತ್ತು ಪ್ರವೇಶಿಸಿರುವ ಜೊಕೊವಿಕ್ ಈ ವರ್ಷ ಆಡಿರುವ ಎಲ್ಲ 20 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಮುಂದಿನ ಸುತ್ತಿನಲ್ಲಿ ಜರ್ಮನಿಯ ಜಾನ್-ಲೆನಾರ್ಡ್ ಸ್ಟ್ರಫ್ರನ್ನು ಎದುರಿಸಲಿದ್ದಾರೆ. ಸ್ಟ್ರಫ್ ಮಂಗಳವಾರ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಡೇವಿಡ್ ಗಫಿನ್ರನ್ನು 6-4, 3-6, 6-4 ಸೆಟ್ಗಳ ಅಂತರದಿಂದ ಮಣಿಸಿದರು.
ಸೋಮವಾರ ಐದನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಜಯ ಸಾಧಿಸಿ ಗಮನ ಸೆಳೆದಿದ್ದ ಆ್ಯಂಡಿ ಮರ್ರೆ ಕೆನಡಾದ ಮಿಲೊಸ್ ರಾವೊನಿಕ್ ವಿರುದ್ಧ ಲಯ ಕಳೆದುಕೊಂಡರು. ಮಳೆಬಾಧಿತ ಪಂದ್ಯದಲ್ಲಿ 6-2, 6-2 ನೇರ ಸೆಟ್ಗಳ ಅಂತರದಿಂದ ಜಯ ಸಾಧಿಸಿರುವ ರಾವೊನಿಕ್ ಕ್ವಾರ್ಟರ್ ತಲುಪಿದರು. 2014ರ ಇಂಡಿಯನ್ ವೆಲ್ಸ್ನಲ್ಲಿ ಬ್ರಿಟನ್ನ ಮರ್ರೆ ವಿರುದ್ಧ ರಾವೊನಿಕ್ ಕೊನೆಯ ಬಾರಿಜಯ ಸಾಧಿಸಿದ್ದರು.