ಉಯಿಘರ್ ಮುಸ್ಲಿಮರ ಮೇಲೆ ನಿಗಾ ಇಡಲು ಆ್ಯಪ್ ತಯಾರಿಸಿದ ಆರೋಪ: ವಾವೆ ಜತೆ ಒಪ್ಪಂದ ಮುರಿದ ಖ್ಯಾತ ಫುಟ್ಬಾಲ್ ಆಟಗಾರ
(Twitter/@AntoGriezmann)
ಮ್ಯಾಡ್ರಿಡ್: ಬಾರ್ಸಿಲೋನಾದ ವಿಶ್ವಕಪ್ ವಿಜೇತ ತಂಡದ ಫುಟ್ಬಾಲ್ ಆಟಗಾರ ಆಂಟೊಯಿನ್ ಗ್ರಿಝ್ಮನ್ ತಾವು ವಾವೆ ಜತೆ ವಾಣಿಜ್ಯ ಒಪ್ಪಂದವನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. ಚೀನಾದ ಟೆಲಿಕಾಂ ಸಂಸ್ಥೆಯಾಗಿರುವ ವಾವೆ ಅಲ್ಲಿನ ಉಯಿಘರ್ ಮುಸ್ಲಿಮರ ಮೇಲೆ ನಿಗಾ ಇರಿಸುವಲ್ಲಿ ಪಾತ್ರ ವಹಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆಂಟೊಯಿನ್ ಅವರು ಒಪ್ಪಂದ ಅಂತ್ಯಗೊಳಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದಿರುವ ಅವರು ಫೇಶಿಯಲ್ ರೆಕಗ್ನಿಶನ್ ಸಾಫ್ಟ್ ವೇರ್ ಬಳಕೆ ಮೂಲಕ 'ಉಯಿಘರ್ಸ್ ಅಲರ್ಟ್' ಅಭಿವೃದ್ಧಿ ಪಡಿಸುವಲ್ಲಿ ವಾವೆ ಸಂಸ್ಥೆ ದೊಡ್ಡ ಪಾತ್ರ ವಹಿಸಿದೆ ಎಂಬ ಕುರಿತು ತಮಗೆ ಬಲವಾದ ಸಂಶಯಗಳಿವೆ ಎಂದು ಹೇಳಿದ್ದಾರೆ.
ಈ ಆರೋಪಗಳನ್ನು ಅಲ್ಲಗಳೆಯಬೇಕು ಹಾಗೂ ಚೀನಾದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಮಾನವ ಹಕ್ಕುಗಳನ್ನು ಗೌರವಿಸುವ ನಿಟ್ಟಿನಲ್ಲಿ ಕೊಡುಗೆ ನೀಡಬೇಕು ಎಂದು ಆಂಟೊಯಿನ್ ಅವರು ವಾವೆ ಸಂಸ್ಥೆಗೆ ತಾಕೀತು ಮಾಡಿದ್ದಾರೆ.
ಅಮೆರಿಕಾ ಮೂಲದ ವಿಚಕ್ಷಣಾ ಸಂಶೋಧನಾ ತಂಡ ಐಪಿವಿಎಂ ಮಂಗಳವಾರ ವರದಿಯೊಂದನ್ನು ಬಿಡುಗಡೆಗೊಳಿಸಿ ಉಯಿಘರ್ ಅಲ್ಪಸಂಖ್ಯಾತರ ಮುಖಗಳನ್ನು ಗುರುತಿಸುವ ಹಾಗೂ ಈ ಕುರಿತು ಪೊಲೀಸರಿಗೆ ಅಲರ್ಟ್ ಕಳುಹಿಸುವ ಫೇಶಿಯಲ್ ರೆಕಗ್ನಿಶನ್ ಸಾಫ್ಟ್ ವೇರ್ ಪರೀಕ್ಷೆಯನ್ನು ವಾವೆ ಸಂಸ್ಥೆ ನಡೆಸುತ್ತಿದೆ ಎಂದು ಹೇಳಿತ್ತು.
ಈ ಸಾಫ್ಟ್ ವೇರ್ ಆಧರಿತವಾಗಿ ಉಯಿಘರ್ ಮುಸ್ಲಿಮರನ್ನು ಶಂಕಾಸ್ಪದ ವರ್ತನೆಗೆ ಬಂಧಿಸಲಾಗುತ್ತಿದೆ ಎಂದು ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆ ಈಗಾಗಲೇ ಆರೋಪಿಸಿದೆ.
ಸಾವಿರಾರು ಉಯಿಘರ್ ಮುಸ್ಲಿಮರನ್ನು ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ದಿಗ್ಬಂಧನದಲ್ಲಿರಿಸಿರುವ ಕುರಿತು ಸಾಕಷ್ಟು ಟೀಕೆಗಳು ಎದುರಾಗಿದ್ದರೂ ಚೀನಾ ಮಾತ್ರ ದಿಗ್ಬಂಧನ ಕೇಂದ್ರಗಳನ್ನು ವೃತ್ತಿಪರ ತರಬೇತಿ ಕೇಂದ್ರಗಳು ಎಂದು ಹೇಳುತ್ತಿದೆ.