ಚಿನ್ನ ಸಹಿತ 10 ಪದಕ ಗೆದ್ದ ಭಾರತ
ಬಾಕ್ಸಮ್ ಇಂಟರ್ನ್ಯಾಶನಲ್
ಹೊಸದಿಲ್ಲಿ: ಸ್ಪೇನ್ನ ಕಾಸ್ಟೆಲ್ಲೊನ್ನಲ್ಲಿ ನಡೆದ ಬಾಕ್ಸಮ್ ಇಂಟರ್ನ್ಯಾಶನಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಮನೀಶ್ ಕೌಶಿಕ್ ಚಿನ್ನದ ಪದಕವನ್ನು ಜಯಿಸಿದ್ದಾರೆ. ಭಾರತವು ಒಟ್ಟು 10 ಪದಕಗಳನ್ನು ಜಯಿಸಿದೆ.
2018ರ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕೌಶಿಕ್ ಪುರುಷರ 63 ಕೆಜಿ ತೂಕ ವಿಭಾಗದ ಫೈನಲ್ನಲ್ಲಿ ಡೆನ್ಮಾರ್ಕ್ನ ನಿಕೊಲಾಯ್ ಟೆರ್ಟೇರಿಯನ್ ಅವರನ್ನು 3-2 ಅಂತರದಿಂದ ಮಣಿಸಿದರು.
ಇದೇ ವೇಳೆ, ವಿಶ್ವ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ವಿಜೇತ ವಿಕಾಸ್ ಕ್ರಿಶನ್ ಅವರು ಪುರುಷರ 69 ಕೆಜಿ ವಿಭಾಗದಲ್ಲಿ ಸ್ಥಳೀಯ ಫೇವರಿಟ್ ಸಿಸ್ಸೊಖೊ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಮಹಿಳೆಯರ ವಿಭಾಗದಲ್ಲಿ ಪೂಜಾ ರಾಣಿ ಅಮೆರಿಕದ ನವೊಮಿ ಗ್ರಹಾಮ್ ವಿರುದ್ಧ 75 ಕೆಜಿ ವಿಭಾಗದ ಫೈನಲ್ನಲ್ಲಿ ಸೋತಿದ್ದಾರೆ. 57 ಕೆಜಿ ವಿಭಾಗದಲ್ಲಿ ಯುವ ಬಾಕ್ಸರ್ ಜಾಸ್ಮಿನ್ ಆಕ್ರಮಣಕಾರಿಯಾಗಿ ಆಟವಾಡಿ ಗಮನ ಸೆಳೆದರು. ಆದರೆ 2019ರ ಯುರೋಪಿಯನ್ ಚಾಂಪಿಯನ್ ಇಟಲಿಯ ಇರ್ಮಾ ಟೆಸ್ಟಾ ವಿರುದ್ಧ 0-5 ಅಂತರದಿಂದ ಸೋಲನುಭವಿಸಿ ಬೆಳ್ಳಿ ಗೆದ್ದುಕೊಂಡರು. ಭಾರತಕ್ಕೆ ಉಳಿದ 5 ಬೆಳ್ಳಿ ಪದಕಗಳನ್ನು ಸಿಮ್ರಾನ್ಜಿತ್ ಕೌರ್(60ಕೆಜಿ), ಮುಹಮ್ಮದ್ ಹಸಮುದ್ದೀನ್(57), ಆಶೀಷ್ ಕುಮಾರ್(75ಕೆಜಿ), ಸುಮಿ ಸಾಂಗ್ವಾನ್(81ಕೆಜಿ) ಹಾಗೂ ಸತೀಶ್ ಕುಮಾರ್(91ಕೆಜಿ) ಗೆದ್ದುಕೊಟ್ಟರು. ಇದಕ್ಕೂ ಮೊದಲು ಸೆಮಿ ಫೈನಲ್ನಲ್ಲಿ ನಿರ್ಗಮಿಸಿರುವ ಹಿರಿಯ ಬಾಕ್ಸರ್ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. 35ನೇ ಆವೃತ್ತಿಯ ಬಾಕ್ಸಮ್ ಟೂರ್ನಿಯಲ್ಲಿ ಭಾರತದಿಂದ ಒಟ್ಟು 14 ಸದಸ್ಯರ ತಂಡ(8 ಪುರುಷರು, 6 ಮಹಿಳೆಯರು)ಭಾಗವಹಿಸಿತ್ತು.