ಐಸಿಸಿ ಟ್ವೆಂಟಿ-20 ವಿಶ್ವಕಪ್: ಭಾರತದ ಮೊದಲ ಎದುರಾಳಿ ತಂಡ ಯಾವುದು ಗೊತ್ತಾ?
photo: AFP
ದುಬೈ: : ಅಕ್ಟೋಬರ್ 24 ರಂದು ನಡೆಯಲಿರುವ ಐಸಿಸಿ ಪುರುಷರ ಟ್ವೆಂಟಿ- 20 ವಿಶ್ವಕಪ್ 2021 ರ ಗ್ರೂಪ್ 2 ರ ತನ್ನ ಮೊದಲ ಪಂದ್ಯದಲ್ಲಿ ಭಾರತವು ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನಅಭಿಯಾನ ಆರಂಭಿಸಲಿದೆ. ಐಸಿಸಿ ಮಂಗಳವಾರ ತನ್ನ ಡಿಜಿಟಲ್ ವೇದಿಕೆಯ ಮೂಲಕ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸಿತು.
ಪುರುಷರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮಾನ್ ಆತಿಥ್ಯದಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ದುಬೈನಲ್ಲಿ ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
ರೌಂಡ್-1
ಅಕ್ಟೋಬರ್ 17 ರಂದು ಮೊದಲ ಸುತ್ತಿನ ಬಿ ಗುಂಪಿನಲ್ಲಿ ಆತಿಥೇಯ ಓಮಾನ್ ಹಾಗೂ ಪಪುವಾ ನ್ಯೂಗಿನಿ ತಂಡಗಳ ಮುಖಾಮುಖಿಯೊಂದಿಗೆ ಪಂದ್ಯಾವಳಿಯು ಆರಂಭವಾಗಲಿದೆ. ಬಿ ಗುಂಪಿನಲ್ಲಿರುವ ಇತರ ತಂಡಗಳಾಗಿರುವ ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶ, ಅದೇ ದಿನ ಸಂಜೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗುತ್ತವೆ.
ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಹಾಗೂ ನಮೀಬಿಯಾ - ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿವೆ. ಈ ತಂಡಗಳು ಅಕ್ಟೋಬರ್ 18ರಿಂದ ಅಬುಧಾಬಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದು, ಅಕ್ಟೋಬರ್ 22 ರವರೆಗೆ ರೌಂಡ್ 1 ಪಂದ್ಯಗಳು ನಡೆಯಲಿವೆ.
ಸೂಪರ್-12
ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಪಂದ್ಯಾವಳಿಯ ಸೂಪರ್ 12 ಹಂತಕ್ಕೆ ತೇರ್ಗಡೆಯಾಗುತ್ತವೆ, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ಸೆಣಸಾಟದೊಂದಿಗೆ ಟೂರ್ನಮೆಂಟ್ ನ ಎರಡನೇ ಸುತ್ತು ಸೂಪರ್-12ರ ಹಂತ ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ. ಅದೇ ದಿನ ಸಂಜೆ ದುಬೈನಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಹೋರಾಟ ನಡೆಸುತ್ತವೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯವು ಅಕ್ಟೋಬರ್ 30ರಂದು ದುಬೈನಲ್ಲಿ ಮುಖಾಮುಖಿಯಾಗುತ್ತವೆ. ಗ್ರೂಪ್-1ರ ಹಂತದ ಪಂದ್ಯವು ನವೆಂಬರ್ 6ರಂದು ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್(ಅಬುಧಾಬಿಯಲ್ಲಿ) ಹಾಗೂ ಇಂಗ್ಲೆಂಡ್ ಹಾಗೂ ದ. ಆಫ್ರಿಕಾ(ಶಾರ್ಜಾದಲ್ಲಿ) ನಡುವಿನ ಪಂದ್ಯದ ಮೂಲಕ ಕೊನೆಯಾಗುತ್ತದೆ.
ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯೊಂದಿಗೆ ಗ್ರೂಪ್ -2ರ ಹಂತ ಆರಂಭವಾಗುತ್ತದೆ. ಪಾಕಿಸ್ತಾನವು ಅ.26ರಂದು ನ್ಯೂಝಿಲ್ಯಾಂಡ್ ಅನ್ನು ಎದುರಿಸಲಿದೆ. ನವೆಂಬರ್ 8ರಂದು ಭಾರತವು ಗ್ರೂಪ್ ಎ ಯಿಂದ ಎರಡನೇ ಸ್ಥಾನ ಪಡೆದ ರೌಂಡ್ 1 ಕ್ವಾಲಿಫೈಯರ್ ತಂಡವನ್ನು ಎದುರಿಸುವ ಮೂಲಕ ಗ್ರೂಪ್ 2ರ ಹಂತವು ಕೊನೆಯಾಗಲಿದೆ.
ಸೆಮಿ ಫೈನಲ್ ಗಳು
ಮೊದಲ ಸೆಮಿ ಫೈನಲ್ ಪಂದ್ಯವು ಅಬುಧಾಬಿಯಲ್ಲಿ ನವೆಂಬರ್ 10ರಂದು ನಡೆದರೆ, ಎರಡನೇ ಸೆಮಿ ಫೈನಲ್ ನವೆಂಬರ್ 11ರಂದು ದುಬೈನಲ್ಲಿ ನಡೆಯಲಿದೆ. ಎರಡೂ ಸೆಮಿ ಫೈನಲ್ ಗೆ ಮೀಸಲು ದಿನಗಳಿವೆ.
ಫೈನಲ್
ನವೆಂಬರ್ 14ರಂದು ರವಿವಾರ ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೋಮವಾರ ಮೀಸಲು ದಿನವಾಗಿದೆ.
ಭಾರತದ ವೇಳಾಪಟ್ಟಿ:
ಸೂಪರ್ 12 ಹಂತ, ಗ್ರೂಪ್- 2
ಭಾರತ vs ಪಾಕಿಸ್ತಾನ ಅಕ್ಟೋಬರ್ 24, ದುಬೈ
ಭಾರತ vs ನ್ಯೂಝಿಲ್ಯಾಂಡ್ ಅಕ್ಟೋಬರ್ 31, ದುಬೈ
ಭಾರತ vs ಅಫ್ಘಾನಿಸ್ತಾನ ನವೆಂಬರ್ 3, ಅಬುಧಾಬಿ
ಭಾರತ vs ಗ್ರೂಪ್ B1 ನವೆಂಬರ್ 5, ದುಬೈ
ಭಾರತ vs ಗ್ರೂಪ್ A2 ನವೆಂಬರ್ 8, ದುಬೈ