ವಿರಾಟ್ ಕೊಹ್ಲಿ ಅಹಂ ತ್ಯಜಿಸಬೇಕು: ಕಪಿಲ್ದೇವ್
ಹೊಸದಿಲ್ಲಿ, ಜ.17: ಟೆಸ್ಟ್ ನಾಯಕತ್ವವನ್ನು ತ್ಯಜಿಸಿರುವ ವಿರಾಟ್ ಕೊಹ್ಲಿ ಹೊಸ ನಾಯಕನ ಅಡಿಯಲ್ಲಿ ಆಡುವಾಗ ತಮ್ಮ ಅಹಂಕಾರವನ್ನು ಬಿಡಬೇಕಾಗುತ್ತದೆ ಎಂದು ಕ್ರಿಕೆಟ್ ಐಕಾನ್ ಕಪಿಲ್ ದೇವ್ ಹೇಳಿದ್ದಾರೆ.
33ರ ಹರೆಯದ ಕೊಹ್ಲಿ ಶನಿವಾರ ದಿಢೀರನೆ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸಿದ್ದ ಕೊಹ್ಲಿಯವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.
ಕೊಹ್ಲಿಯ ನಿರ್ಧಾರವನ್ನು ಸ್ವಾಗತಿಸಿದ ಕಪಿಲ್ದೇವ್, "ಕೊಹ್ಲಿ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಹೆಚ್ಚು ಒತ್ತಡದಲ್ಲಿದ್ದಾರೆ. ಸುನೀಲ್ ಗವಾಸ್ಕರ್ ಕೂಡ ನನ್ನ ನಾಯಕತ್ವದಡಿ ಆಡಿದ್ದರು. ನಾನು ಕೆ.ಶ್ರೀಕಾಂತ್ ಹಾಗೂ ಮುಹಮ್ಮದ್ ಅಝರುದ್ದೀನ್ ನಾಯಕತ್ವದಡಿಯಲ್ಲಿ ಆಡಿದ್ದೇನೆ. ನನಗೆ ಯಾವುದೇ ಅಹಂ ಇರಲಿಲ್ಲ. ಕೊಹ್ಲಿ ತನ್ನ ಅಹಂಕಾರವನ್ನು ಬಿಟ್ಟು ಯುವ ಕ್ರಿಕೆಟಿಗರ ನಾಯಕತ್ವದಡಿ ಆಡಬೇಕಾಗುತ್ತದೆ. ಇದು ಅವರಿಗೆ, ಭಾರತದ ಕ್ರಿಕೆಟಿಗೆ ನೆರವಾಗಲಿದೆ.ಕೊಹ್ಲಿ ಹೊಸ ನಾಯಕ, ಹೊಸ ಆಟಗಾರರಿಗೆ ಮಾರ್ಗದರ್ಶನ ನೀಡಬೇಕು. ನಾವು ವಿರಾಟ್ರಂತಹ ಬ್ಯಾಟರ್ನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ’’ಎಂದು ’ಮಿಡ್ ಡೇ’ ದಿನಪತ್ರಿಕೆಗೆ ಕಪಿಲ್ ದೇವ್ ಹೇಳಿದ್ದಾರೆ.