ಮೈದಾನದೊಳಗೆ ನುಸುಳಿ ಮೆಸ್ಸಿಯೊಂದಿಗೆ ಬಲವಂತದಿಂದ ಸೆಲ್ಫಿ ಕ್ಲಿಕ್ಕಿಸಿದ ಫುಟ್ಬಾಲ್ ಅಭಿಮಾನಿ
ಬ್ಯುನಸ್ ಐರಿಸ್: ಇತ್ತೀಚೆಗೆ ಸೆನೆಗಲ್ ವಿರುದ್ಧ ಈಜಿಪ್ಟ್ ಪಂದ್ಯದ ವೇಳೆ ಭದ್ರತಾ ಉಲ್ಲಂಘನೆಯ ಘಟನೆಯ ಕುರಿತು ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆ ಮಾಸುವ ಮೊದಲೇ ಆಟಗಾರನ ಸುರಕ್ಷತೆಗೆ ಬೆದರಿಕೆ ಒಡ್ಡುವ ಮತ್ತೊಂದು ಘಟನೆ ನಡೆದಿದೆ.
ಈಕ್ವೆಡಾರ್ ವಿರುದ್ಧ ಅರ್ಜೆಂಟೀನದ ವಿಶ್ವಕಪ್ 2022 ರ ಅರ್ಹತಾ ಪಂದ್ಯ ದ ವೇಳೆ ಇದೇ ರೀತಿಯ ಭದ್ರತಾ ಉಲ್ಲಂಘನೆ ನಡೆದಿದೆ. ಮೈದಾನದೊಳಗೆ ನುಗ್ಗಿದ ಫುಟ್ಬಾಲ್ ಅಭಿಮಾನಿಯೊಬ್ಬ ಅರ್ಜೆಂಟೀನ ನಾಯಕ ಲಿಯೊನೆಲ್ ಮೆಸ್ಸಿಯ ಕುತ್ತಿಗೆಯನ್ನು ಬಲವಂತವಾಗಿ ಹಿಡಿದು ಫುಟ್ಬಾಲ್ ದಿಗ್ಗಜನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಅಭಿಮಾನಿಯ ವರ್ತನೆಗೆ ಮೆಸ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಕ್ವೆಡಾರ್ ಜೆರ್ಸಿಯನ್ನು ಧರಿಸಿದ್ದ ಅಭಿಮಾನಿಯು ಪಿಚ್ ನಲ್ಲಿ ಓಡಿಕೊಂಡು ಹೋಗಿ ಮೆಸ್ಸಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯಶಸ್ವಿಯಾದರೂ, ಭದ್ರತಾ ಸಿಬ್ಬಂದಿ ಆತನನ್ನು ಶೀಘ್ರದಲ್ಲೇ ಮೈದಾನದಿಂದ ಹೊರ ಕರೆದೊಯ್ದರು.
ಫುಟ್ಬಾಲ್ ಅಭಿಮಾನಿ ತನ್ನ ಚಿತ್ರ ಹಾಗೂ "ಸಾರ್ವಕಾಲಿಕ ಅತ್ಯುತ್ತಮ ಆಟಗಾರ" ನೊಂದಿಗಿನ ಸಂಕ್ಷಿಪ್ತ ವೀಡಿಯೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಮೆಸ್ಸಿಯವರನ್ನು ಶ್ಲಾಘಿಸಿ ದೀರ್ಘ ಟಿಪ್ಪಣಿಯನ್ನು ಸಹ ಬರೆದಿದ್ದಾನೆ.