ರಿಷಭ್ ಪಂತ್ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆ
ಹೊಸದಿಲ್ಲಿ: ಕಳೆದ ವಾರ ನಡೆದ ಭೀಕರ ಕಾರು ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಭಾರತದ ವಿಕೆಟ್ಕೀಪರ್ ಬ್ಯಾಟರ್ ರಿಷಬ್ ಪಂತ್ ಮುಂಬೈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"ರಿಷಭ್ ಪಂತ್ ಅವರು ಶುಕ್ರವಾರ ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಮೇಲೆ ನಿಗಾವಹಿಸಲಾಗಿದೆ. ಡಾ. ದಿನ್ಶಾ ಪರ್ದಿವಾಲಾ ಹಾಗೂ ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ಔಷಧ ತಂಡಡ ಸಲಹೆಯ ಮೇರೆಗೆ ಮುಂದಿನ ಕ್ರಮ ಅನುಸರಿಸಲಾಗುತ್ತದೆ" ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಹಾಗೂ ಆರ್ತ್ರೋಸ್ಕೊಪಿ ನಿರ್ದೇಶಕ ಡಾ. ಪರ್ದಿವಾಲಾ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು.
ಪಂತ್ ಅವರು ವಿಶೇಷ ವಿಮಾನಯಾನದಲ್ಲಿ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲದ ಕಾರಣ ಡೆಹ್ರಾಡೂನ್ನಿಂದ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಕರೆದೊಯ್ಯಲಾಯಿತು.