ಐಪಿಎಲ್: ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ ಭರ್ಜರಿ ಜಯ
ಸ್ಯಾಮ್ಸನ್, ಬಟ್ಲರ್, ಜೈಸ್ವಾಲ್ ಅರ್ಧಶತಕ, ಯಜುವೇಂದ್ರ ಚಹಾಲ್ಗೆ 4 ವಿಕೆಟ್
ಹೈದರಾಬಾದ್, ಎ.2: ಐಪಿಎಲ್ನ 4ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 72 ರನ್ನಿಂದ ಭರ್ಜರಿ ಜಯ ದಾಖಲಿಸಿದೆ.
ರವಿವಾರ ಗೆಲ್ಲಲು 204 ರನ್ ಗುರಿ ಪಡೆದಿದ್ದ ಹೈದರಾಬಾದ್ ಯಾವ ಹಂತದಲ್ಲೂ ಹೋರಾಟವನ್ನು ನೀಡದೆ ನಿರಂತರ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದು, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ಸ್ಪಿನ್ನರ್ ಯಜುವೇಂದ್ರ ಚಹಾಲ್(4-17) ಹಾಗೂ ವೇಗದ ಬೌಲರ್ ಟ್ರೆಂಟ್ ಬೌಲ್ಟ್(2-21) ಹೈದರಾಬಾದ್ ಬ್ಯಾಟರ್ಗಳಿಗೆ ಸವಾಲಾಗಿ ಪರಿಣಮಿಸಿದರು. ಹೈದರಾಬಾದ್ ಪರ ಅಬ್ದುಲ್ ಸಮದ್(ಔಟಾಗದೆ 32 ರನ್, 32 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(27 ರನ್,23 ಎಸೆತ),ಉಮ್ರಾನ್ ಮಲಿಕ್(ಔಟಾಗದೆ 19) ಹಾಗೂ ಆದಿಲ್ ರಶೀದ್(18 ರನ್, 13 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಪೆವಿಲಿಯನ್ಗೆ ಪರೇಡ್ ನಡೆಸಿದರು.
ಆರಂಭಿಕ ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ ರನ್ ಖಾತೆ ತೆರೆಯಲು ವಿಫಲವಾಗಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್(55 ರನ್, 32 ಎಸೆತ), ಜೋಸ್ ಬಟ್ಲರ್(54 ರನ್, 22 ಎಸೆತ) ಹಾಗೂ ಯಶಸ್ವಿ ಜೈಸ್ವಾಲ್(54 ರನ್, 37 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 203 ರನ್ ಗಳಿಸಿತು.