ಐಪಿಎಲ್: ಡೆಲ್ಲಿ ವಿರುದ್ಧ ಆರ್‌ಸಿಬಿಗೆ 23 ರನ್ ಜಯ
ವಿರಾಟ್ ಕೊಹ್ಲಿ ಅರ್ಧಶತಕ

ಬೆಂಗಳೂರು, ಎ.15: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್‌ನ 20ನೇ ಪಂದ್ಯದಲ್ಲಿ 23 ರನ್ ಅಂತರದಿಂದ ಗೆಲುವು ದಾಖಲಿಸಿದೆ.
ಗೆಲ್ಲಲು 175 ರನ್ ಗುರಿ ಪಡೆದಿದ್ದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೆಲ್ಲಿ ಪರ ಮನೀಶ್ ಪಾಂಡೆ ಬರೋಬ್ಬರಿ 50 ರನ್(38 ಎಸೆತ, 5 ಬೌಂಡರಿ, 1 ಸಿಕ್ಸರ್)ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅನ್ರಿಚ್ ನೋರ್ಟ್ಜೆ(ಔಟಾಗದೆ 23 ರನ್), ಅಕ್ಷರ್ ಪಟೇಲ್(21 ರನ್, 14 ಎಸೆತ) ಹಾಗೂ ಡೇವಿಡ್ ವಾರ್ನರ್(19 ರನ್, 13 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪೃಥ್ವಿ ಶಾ ಹಾಗೂ ಮಿಚೆಲ್ ಮಾರ್ಷ್ ರನ್ ಖಾತೆ ತೆರೆಯುವಲ್ಲಿಯೂ ವಿಫಲರಾಗಿರುವುದು ಡೆಲ್ಲಿ ಗೆಲುವಿಗೆ ದೊಡ್ಡ ಅಡ್ಡಿಯಾಯಿತು. ಯಶ್ ಧುಲ್(1 ರನ್) ಹಾಗೂ ಅಭಿಷೇಕ್ ಪೊರೆಲ್(5 ರನ್)ಅಲ್ಪ ಮೊತ್ತಕ್ಕೆ ಔಟಾದರು.
ಆರ್‌ಸಿಬಿ ಪರ ವಿಜಯಕುಮಾರ್ ವ್ಯಾಶಕ್(3-20) ಹಾಗೂ ಮುಹಮ್ಮದ್ ಸಿರಾಜ್(2-23)ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಆರ್‌ಸಿಬಿ 174/6: ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು.







