ಮರಿಯಮ್ಮ ಕೋಶಿ ಹಾಕಿ ಇಂಡಿಯಾದ ಅಧ್ಯಕ್ಷೆ
ಹೊಸದಿಲ್ಲಿ, ನ.25: ಹಾಕಿ ಇಂಡಿಯಾದ ನೂತನ ಅಧ್ಯಕ್ಷೆಯಾಗಿ ಮರಿಯಮ್ಮ ಕೋಶಿ ಇಂದು ಆಯ್ಕೆಯಾಗಿದ್ದಾರೆ.
ಹಾಕಿ ಇಂಡಿಯಾದ ಆಡಳಿತ ಮಂಡಳಿಯ 41ನೆ ಸಭೆಯಲ್ಲಿ ಮರಿಯಮ್ಮ ಕೋಶಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದನ್ನು ಹಾಲಿ ಅಧ್ಯಕ್ಷ ನರೇಂದ್ರ ಬಾತ್ರಾ ಪ್ರಕಟಿಸಿದರು.
ನರೇಂದ್ರ ಬಾತ್ರಾ ಅವರು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ (ಎಫ್ಐಎಚ್) ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದರು. ಈ ಕಾರಣದಿಂದಾಗಿ ಬಾತ್ರಾ ಅಧ್ಯಕ್ಷ ಸ್ಥಾನವನ್ನು ತೆರವುಗೊಳಿಸಿದ್ದರು. ಬಾತ್ರಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷ ಹುದ್ದೆಯಲ್ಲಿ ಏಕಕಾಲಕ್ಕೆ ಸೇವೆ ಸಲ್ಲಿಸುವಂತಿಲ್ಲ. ಈ ಕಾರಣದಿಂದಾಗಿ ಅವರು ಹಾಕಿ ಇಂಡಿಯಾದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ.
ಹಾಕಿ ಇಂಡಿಯಾ ಕಾರ್ಯದರ್ಶಿ ಮುಹಮ್ಮದ್ ಮುಶ್ತಾಕ್ ಅಹ್ಮದ್ ಅವರು ಹಾಕಿ ಇಂಡಿಯಾ ಲೀಗ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಬಾತ್ರಾ 2010ರಿಂದ 2014ರ ತನಕ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2014ರಿಂದ ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.