ಕೋಚ್ ವಿರುದ್ಧ ಅಕ್ಮಲ್ ಮತ್ತೆ ವಾಗ್ದಾಳಿ
ಕರಾಚಿ, ಆ.19: ಪಿಸಿಬಿ ಶೋಕಾಸ್ ನೋಟಿಸ್ ನೀಡಿರುವ ಹೊರತಾಗಿಯೂ ಪಾಕಿಸ್ತಾನದ ಬ್ಯಾಟ್ಸ್ಮನ್ ಉಮರ್ ಅಕ್ಮಲ್ ತಂಡದ ಪ್ರಧಾನ ಕೋಚ್ ಮಿಕ್ಕಿ ಅರ್ಥರ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
‘‘ಚಾಂಪಿಯನ್ಸ್ ಟ್ರೋಫಿಗೆ ಮೊದಲು ಇಂಗ್ಲೆಂಡ್ನಲ್ಲಿ ‘ಡಮ್ಮಿ’ ಫಿಟ್ನೆಸ್ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ ನನ್ನನ್ನು ಅನುತ್ತೀರ್ಣಗೊಳಿಸಿ ಸ್ವದೇಶಕ್ಕೆ ವಾಪಸ್ ಕಳುಹಿಸಲಾಗಿತ್ತು. ನನ್ನನ್ನು ತಂಡದಿಂದ ಹೊರಹಾಕುವ ಉದ್ದೇಶದಿಂದಲೇ ಈ ಪರೀಕ್ಷೆ ಮಾಡಲಾಗಿತ್ತು’’ ಎಂದು ಟ್ವಿಟರ್ನಲ್ಲಿ ಉಮರ್ ಟೀಕಿಸಿದ್ದಾರೆ.
ಪಾಕಿಸ್ತಾನ ತಂಡ ಕಳೆದ ವರ್ಷ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೋಚ್ ಅರ್ಥರ್ ಅವರು ಉಮರ್ ಫಿಟ್ನೆಸ್ ಬಗ್ಗೆ ಪಿಸಿಬಿಗೆ ದೂರು ನೀಡಿದ್ದರು. ಆಬಳಿಕ ಈ ಇಬ್ಬರ ನಡುವೆ ಅಂತರ ಹೆಚ್ಚಾಗಿತ್ತು. ಪಿಸಿಬಿಯಿಂದ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ಉಮರ್ ಸೇರ್ಪಡೆಯಾದ ಬಳಿಕ ಉಮರ್- ಅರ್ಥರ್ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿತ್ತು.
Next Story