-

ಚಿನ್ನ ಕಳ್ಳಸಾಗಣೆಯ ನಾನಾ ಮುಖಗಳು, ಪೊಲೀಸರ ಮೇಲೆ ನಿರಂತರ ಹಲ್ಲೆ

-

ಚಿನ್ನದ ಬಝಾರ್ ಸದಾ ಗರಂ 

ಚಿನ್ನದ ಆಭರಣಗಳ ಬೇಡಿಕೆ ವಿಶ್ವದಲ್ಲೇ ಅತಿಹೆಚ್ಚು ಭಾರತದಲ್ಲೇ. ಈ ಕಾರಣದಿಂದಲೇ ಭಾರತದಲ್ಲಿ ಚಿನ್ನದ ಬಝಾರ್‌ನಲ್ಲಿ ಸದಾ ಖರೀದಿದಾರರು ಇದ್ದೇ ಇರುತ್ತಾರೆ. ಚಿನ್ನದ ಬೇಡಿಕೆಯನ್ನು ಗಮನಿಸಿ ಚಿನ್ನ ಸ್ಮಗ್ಲರ್‌ಗಳೂ ಬಹಳ ಕಾಲದಿಂದ ಸಕ್ರಿಯರಿದ್ದಾರೆ. ಒಂದೊಮ್ಮೆ ಸಮುದ್ರ ಮಾರ್ಗದಲ್ಲಿ ಚಿನ್ನ ಕಳ್ಳ ಸಾಗಾ ನಡೆಯುತ್ತಿದ್ದರೆ ಇದೀಗ ಅವರ ಕಾರ್ಯವೈಖರಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು ವಿಮಾನಗಳಲ್ಲಿ ಚಿನ್ನದ ಸ್ಮಗ್ಲಿಂಗ್ ಘಟನೆಗಳು ಹೆಚ್ಚುತ್ತಿವೆ. ಕಸ್ಟಮ್ಸ್ ಅಧಿಕಾರಿಗಳು ನಮ್ಮ ದೇಶದ ಎರಡು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸ್ಮಗ್ಲಿಂಗ್‌ನ ಚಿನ್ನವನ್ನು ಆಗಾಗ ಪತ್ತೆ ಹಚ್ಚುತ್ತಲೇ ಇದ್ದಾರೆ. ಅವುಗಳೆಂದರೆ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಂಬರ್ ವನ್ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಮುಂಬೈ ಏರ್‌ಪೋರ್ಟ್ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಈ ಎರಡೂ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಗುಪ್ತವಾಗಿ ತಂದಿರುವ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚುತ್ತಿರುವ ಘಟನೆಗಳು ಏರುತ್ತಿವೆ.

 ಚಿನ್ನದ ಸ್ಮಗ್ಲರ್‌ಗಳು ಮೊದಮೊದಲು ಸಾಮಾನುಗಳಲ್ಲಿ ಅಡಗಿಸಿಟ್ಟು ಚಿನ್ನವನ್ನು ಸ್ಮಗ್ಲಿಂಗ್ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಂತೂ ಶರೀರದೊಳಗೆ ಅಡಗಿಸಿಟ್ಟು, ಅಥವಾ ಟಾಯ್ಲೆಟ್‌ನಲ್ಲಿ ಅಡಗಿಸಿಟ್ಟು ಚಿನ್ನದ ಸ್ಮಗ್ಲಿಂಗ್ ಮಾಡುತ್ತಿದ್ದಾರೆ. ಇದಕ್ಕಾಗಿ ವಿಮಾನಕ್ಕೆ ಸಂಬಂಧಿಸಿದ ಕ್ರೂವ್ ಮೆಂಬರ್‌ಗಳ ಸಹಾಯವನ್ನೂ ಪಡೆಯುತ್ತಿದ್ದಾರೆ. ಇತ್ತೀಚಿನ ತನಿಖೆಯಲ್ಲಿ ವಿಮಾನ ಕಂಪೆನಿಯ ಪೈಲೆಟ್ ಮತ್ತು ಕ್ರೂವ್ ಮೆಂಬರ್‌ಗಳನ್ನು ಚಿನ್ನದ ಸ್ಮಗ್ಲಿಂಗ್‌ಗಾಗಿ ಬಂಧಿಸಿದ್ದೂ ಇದೆ. ಕಸ್ಟಮ್ಸ್ ವಿಭಾಗದ ಪ್ರಿನ್ಸಿಪಲ್ ಕಮಿಷನರ್ ರಂಜನ್ ಕುಮಾರ್ ರೈಥರೆ ಪತ್ರಕರ್ತರಿಗೆ ತಿಳಿಸಿದಂತೆ ಈ ತನಕ ಅಧಿಕಾಂಶ ಚಿನ್ನ ಕಳ್ಳ ಸಾಗಣೆೆಯನ್ನು ವಿಮಾನ ಯಾತ್ರಿಗಳಿಂದ ಪತ್ತೆ ಹಚ್ಚಲಾಗಿದೆ. ಮೊಬೈಲ್, ಇಸ್ತ್ರಿ ಪೆಟ್ಟಿಗೆ, ವಿಮಾನದ ಶೌಚಾಲಯ, ಬೆಲ್ಟ್, ವಿಸ್ಕಿ ಬಾಟಲಿ, ಎಲ್‌ಸಿಡಿ ಟಿವಿ, ಪೆನ್‌ನ ರಿಫೀಲ್, ಮ್ಯಾಗಝಿನ್, ಪೇಪರ್‌ನ ಕವರ್ ಜೊತೆಗೆ ಚಿನ್ನವನ್ನು ಸ್ಮಗ್ಲಿಂಗ್ ಮಾಡಿರುವ ಘಟನೆಗಳನ್ನು ಪತ್ತೆ ಹಚ್ಚಲಾಗಿದೆ. ದಕ್ಷಿಣ ಪೂರ್ವ ದೇಶಗಳು ಮತ್ತು ಮಧ್ಯಪೂರ್ವ ದೇಶಗಳಿಂದ ಚಿನ್ನವನ್ನು ಮುಂಬೈಗೆ ತರಲಾಗುತ್ತಿದೆ. ಮುಂಬೈಯಲ್ಲಿ 2015-2016ರಲ್ಲಿ ಈ ತನಕ 61 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ವಿಭಾಗ ಜಪ್ತಿ ಮಾಡಿದೆ. 2014-2015ರಲ್ಲಿ 107 ಕೋಟಿ ರೂ. ಮೌಲ್ಯದ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.

ಅದೇ ರೀತಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳೂ ನಡೆಯುತ್ತಿದ್ದು ಮೊದಲ ಸ್ಥಾನ ದಿಲ್ಲಿಯದ್ದಾಗಿದ್ದರೆ ಎರಡನೇ ಸ್ಥಾನ ಮುಂಬೈಯದ್ದಾಗಿದೆ. ಏರ್‌ಪೋರ್ಟ್ ಒಳಗಡೆ ಬಿಗು ಸುರಕ್ಷಾ ವ್ಯವಸ್ಥೆ ಇದ್ದರೂ ಕಳ್ಳತನದ ಘಟನೆಗಳು ನಡೆಯುತ್ತಲೇ ಇವೆ. 2013ರಿಂದ ಹಿಡಿದು ಇತ್ತೀಚಿನ ತನಕದ ಅಂಕಿ ಅಂಶ ಗಮನಿಸಿದರೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ 157 ಕಳ್ಳತನದ ಘಟನೆಗಳು ಸಂಭವಿಸಿವೆ. ಮುಂಬೈಯಲ್ಲಿ 2013ರಿಂದ ಈ ತನಕ 77 ಕಳ್ಳತನದ ಘಟನೆಗಳು ಸಂಭವಿಸಿವೆ. ಇವುಗಳಲ್ಲಿ ವಿಮಾನ ಪ್ರಯಾಣಿಕರ ಲಗೇಜ್ ಕಾಣೆಯಾಗಿರುವುದೇ ಹೆಚ್ಚು. ಇದೇ ಆಗಸ್ಟ್ 30ರಂದು ಏಳು ಚಿನ್ನ ಕಳ್ಳ ಸಾಗಣೆ ಪ್ರಕರಣವನ್ನು ಪತ್ತೆ ಹಚ್ಚಿದ್ದರು. ಇದರಲ್ಲಿ ಭಾರತಕ್ಕೆ ಅಕ್ರಮವಾಗಿ ತಂದಿರುವ 6 ಕಿಲೋಗೂ ಅಧಿಕ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಈ ವರ್ಷ ಮೊದಲ ಆರು ತಿಂಗಳಲ್ಲಿ ಮುಂಬೈ ಕಸ್ಟಮ್ಸ್ ವಿಭಾಗವು ಚಿನ್ನ ಕಳ್ಳಸಾಗಣೆಯ 42 ಪ್ರಕರಣಗಳ ಪತ್ತೆ ಮಾಡಿತ್ತು. ಆದರೆ ಆಗಸ್ಟ್‌ನಲ್ಲಿ ಡೆಪ್ಯುಟಿ ಕಮಿಷನರ್ ಧುಲೆ ಅವರ ತಂಡ 15ಕ್ಕೂ ಅಧಿಕ ಪ್ರಕರಣಗಳಲ್ಲಿ 4.50 ಕೋಟಿಯನ್ನು ಸರಕಾರದ ತಿಜೋರಿಗೆ ಜಮೆ ಮಾಡಿದ್ದಾರೆ.

ಮರೆಗುಳಿ ರೈಲ್ವೆ ಪ್ರಯಾಣಿಕರಿಗೆ ಹೆಲ್ಪ್‌ಲೈನ್

ಮುಂಬೈಯ ಉಪನಗರದ ಲೋಕಲ್ ರೈಲುಗಳ ಪ್ರಯಾಣದ ಸಂದರ್ಭದಲ್ಲಿ ಅನೇಕ ಸಲ ರೈಲು ಪ್ರಯಾಣಿಕರು ತಮ್ಮ ಅಮೂಲ್ಯ ಸಾಮಾನುಗಳನ್ನು ರೈಲೊಳಗೇ ಮರೆತು ಹೋಗುವುದಿದೆ. ಇದನ್ನು ಮರಳಿ ಪಡೆಯುವಲ್ಲಿ ರೈಲ್ವೆ ಪೊಲೀಸರ ಹೆಲ್ಪ್‌ಲೈನ್ ಬಹಳ ಸಹಕಾರಿಯಾಗುತ್ತಿದೆ. ಈ ಕಾರಣದಿಂದ ಆಗಸ್ಟ್ ತಿಂಗಳಲ್ಲಿ ಜಿಆರ್‌ಪಿ ಅಧಿಕಾರಿಗಳು ರೈಲ್ವೆ ಪ್ರಯಾಣಿಕರ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹೆಲ್ಪ್‌ಲೈನ್‌ನ ಸಹಾಯದಿಂದ ವಾಪಸು ಮಾಡಿದ್ದಾರೆ. ಇದರಲ್ಲಿ ಲ್ಯಾಪ್‌ಟಾಪ್, ಆಭರಣ, ಮೊಬೈಲ್, ಬ್ಯಾಗ್..... ಇತ್ಯಾದಿ ಒಳಗೊಂಡಿವೆ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬೋಗಿಯೊಳಗಿನ ಲಗೇಜ್ ಹಲಗೆಯಲ್ಲಿ ಬ್ಯಾಗ್ ಇರಿಸಿದವರು ಕೆಲವೊಮ್ಮೆ ಇಳಿಯುವಾಗ ಅದನ್ನು ಮರೆತು ಇಳಿಯುತ್ತಿದ್ದು ಇವರ ಸಂಖ್ಯೆ ಏರುತ್ತಿದೆ. ಎಲ್ಲರಿಗೂ ಇಳಿಯುವ ಅವಸರ. ನೆನಪಾಗುವಾಗ ಆ ರೈಲು ಮುಂದೆ ಹೋಗುತ್ತಿರುತ್ತದೆ. ಇಂತಹ ಮರೆಗುಳಿ ಪ್ರಯಾಣಿಕರಿಗೆ ರೈಲ್ವೆಯ ಹೆಲ್ಪ್‌ಲೈನ್ ಸಹಾಯವಾಗಿದೆ.

ಮುಂಬೈ ಲೋಕಲ್ ರೈಲು ಪ್ರಯಾಣಿಕರ ನೆರವಿಗಾಗಿ ರೈಲ್ವೆ ಪೊಲೀಸರ ಹೆಲ್ಪ್‌ಲೈನ್ ನಂಬರ್ 9833331111 ಇದೆ. ಈ ನಂಬರ್‌ಗೆ ಬಂದಿರುವ ದೂರುಗಳ ಅನುಸಾರ ಆಗಸ್ಟ್ ತಿಂಗಳಲ್ಲಿ 15 ಲಕ್ಷ 42 ಸಾವಿರದ 670 ರೂಪಾಯಿ ಮೌಲ್ಯದ ವಸ್ತುಗಳನ್ನ ರೈಲ್ವೆ ಪೊಲೀಸರು ಅದರ ಮಾಲಕರಿಗೆ ಹಿಂದಿರುಗಿಸಿದ್ದಾರೆ.

ಪೊಲೀಸರ ಮೇಲೆ ಹೆಚ್ಚುತ್ತಿರುವ ಹಲ್ಲೆ

ಮುಂಬೈ ಟ್ರಾಫಿಕ್ ಪೊಲೀಸರಿಗೆ ಡ್ಯೂಟಿಯ ಸಮಯ ಅಪಾಯ ಸಂಭವಿಸುವ ಘಟನೆಗಳು ಹೆಚ್ಚುತ್ತಿವೆ. ಹೆಡ್‌ಕಾನ್ಸ್‌ಟೇಬಲ್ ವಿಲಾಸ್ ಶಿಂಧೆಯವರು ಬೈಕ್ ಸವಾರನ ಹಲ್ಲೆಯ ನಂತರ ಸಾವನ್ನಪ್ಪಿದ ಘಟನೆಗೆ ಇದೀಗ ಟ್ರಾಫಿಕ್ ಪೊಲೀಸರು ವ್ಯಗ್ರರಾಗಿದ್ದಾರೆ. ಕಳೆದ ಅನೇಕ ತಿಂಗಳುಗಳಿಂದ ಟ್ರಾಫಿಕ್ ಪೊಲೀಸರ ಮೇಲೆ ಇಂತಹ ಹಲ್ಲೆಯ ಘಟನೆಗಳು ಹೆಚ್ಚುತ್ತಿವೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ 208 ಟ್ರಾಫಿಕ್ ಪೋಲಿಸರ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇಲ್ಲಿ ಆರೋಪಿಗಳಿಗೆ ಶಿಕ್ಷೆಯ ಬದಲು ಇಲ್ಲಿನ ಕಾನೂನಿನಲ್ಲಿ ಜಾಮೀನು ಸಿಗುವುದರಿಂದ ಪೊಲೀಸರಿಗೆ ಬೇಸರವಾಗುತ್ತಿದೆ. 2014ರಲ್ಲಿ 33 ಟ್ರಾಫಿಕ್ ಪೊಲೀಸರಿಗೆ ಥಳಿಸಲಾಗಿತ್ತು. 2015ರಲ್ಲಿ 47 ಮತ್ತು ಈ ವರ್ಷ ಮೊದಲ ನಾಲ್ಕು ತಿಂಗಳಲ್ಲಿ 20 ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಮುಂಬೈಯ ಹಲವು ಫ್ಲೈ ಓವರ್‌ಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರದ ವಾಹನಗಳಿಗೆ ನಿಷೇಧವಿದೆ. ಆದರೆ ಬೈಕ್ ಸವಾರರು ಇದನ್ನು ಹತ್ತಿದಾಗ ಪೊಲೀಸರು ತಡೆಯುತ್ತಾರೆ. ಆಗ ಗಲಾಟೆಯಾಗುತ್ತದೆ.

ಮುಂಬೈ ನಗರದಲ್ಲಿ ಟ್ರಾಫಿಕ್ ಪೊಲೀಸರ ಸಂಖ್ಯೆ 3,500 ಮೀರಿಲ್ಲ. ಇವರಲ್ಲಿ 400 ಮಹಿಳಾ ಪೊಲೀಸರೂ ಇದ್ದಾರೆ. ಅಧಿಕಾರಿಗಳ ಪ್ರಕಾರ ಎಲ್ಲಾ ಫ್ಲೈಓವರ್‌ಗಳಲ್ಲಿ ಪೊಲೀಸರನ್ನು ಇರಿಸಲು ಟ್ರಾಫಿಕ್ ಪೊಲೀಸರ ಬಳಿ ಅಷ್ಟೊಂದು ಮ್ಯಾನ್‌ಪವರ್ ಇಲ್ಲವಂತೆ. ಹೀಗಾಗಿ ಕೆಲಸದ ಒತ್ತಡ ಪೊಲೀಸರಿಗೆ ಹೆಚ್ಚಾಗಿದೆ. ಈ ನಡುವೆ ಥಾಣೆ ಜಿಲ್ಲೆಯಲ್ಲಿ ಗಣೇಶ ಪ್ರತಿಮೆ ವಿಸರ್ಜನೆಯ ಸಮಯ ಸಿಟ್ಟುಗೊಂಡ ಗಣೇಶ ಭಕ್ತರು ನೀರಿಗೆ ಇಳಿಯಲು ಬಿಡದ ಪೊಲೀಸ್ ಅಧಿಕಾರಿಯನ್ನೇ ಮುಳುಗಿಸಲು ನೋಡಿದ್ದೂ ಪೊಲೀಸರಿಗೆ ಸಿಟ್ಟು ಬಂದಿದೆ. ಅತ್ತ ಭಿವಂಡಿಯ ಕೋಟರ್‌ಗೇಟ್‌ನ ಧಾಮನ್ಕರ್ ನಾಕಾ ಪೊಲೀಸ್ ಚೌಕಿ ಮೇಲೆ 2006ರಲ್ಲಿ ಹಲ್ಲೆ ನಡೆಸಿದ್ದ 18 ಆರೋಪಿಗಳನ್ನು ಥಾಣೆ ಸೆಷನ್ ನ್ಯಾಯಾಲಯ ಬಿಡುಗಡೆಗೊಳಿಸಿದೆ.

ಇದೀಗ ಕಲ್ಯಾಣ್‌ನ ಮೋಹನೆ ಎಂಬಲ್ಲಿ ಸರಳಿನಿಂದ ಪೊಲೀಸರೊಬ್ಬರಿಗೆ ಥಳಿಸಲಾಗಿದೆ. ಮುಂಬೈಯ ಪ್ರಖ್ಯಾತ ಗಣೇಶ ಮಂಡಳಿ ‘ಲಾಲ್‌ಬಾಗ್ ನ ರಾಜಾ’ ಇದರ ಕಾರ್ಯಕರ್ತರಿಗೂ ಪೊಲೀಸರಿಗೂ ಈ ಬಾರಿ ವಿವಾದ ಕಾಣಿಸಿ ಹಲ್ಲೆ ಮಾಡಿರುವ ಆರೋಪವೂ ಇದೆ.

ಖಂಡಾಲಾ, ಲೋನಾವಾಳ ಸಾಕು, ಇನ್ನೀಗ ಯೆವೂರ್

ಮುಂಬೈಯ ನೆರೆಯ ಥಾಣೆಯಲ್ಲಿನ ಯೆವೂರ್ ಈಗಾಗಲೇ ಹಿಲ್‌ಸ್ಟೇಷನ್ ಆಗಿ ಪ್ರಖ್ಯಾತಿ ಪಡೆದಿದ್ದರೆ, ಇನ್ನು ಮುಂದೆ ಪ್ರವಾಸ ಸ್ಥಳವಾಗಿಯೂ ರೂಪು ಪಡೆಯಲಿದೆ. ಅರಣ್ಯ ಇಲಾಖೆ ಮತ್ತು ಥಾಣೆ ಮನಪಾ ಜಂಟಿಯಾಗಿ ಇದನ್ನು ಪ್ರವಾಸಿ ಸ್ಥಳದ ರೂಪದಲ್ಲಿ ವಿಕಸಿತಗೊಳಿಸಲು ಯೋಜನೆ ರೂಪಿಸಿದೆ.

ಆದಿವಾಸಿಗಳೇ ಹೆಚ್ಚಿಗಿರುವ ಯೆವೂರ್ ಅರಣ್ಯ ಕ್ಷೇತ್ರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿ ನಿಸರ್ಗ ಉದ್ಯಾನ ಮತ್ತು ಆದಿವಾಸಿ ಸಂಸ್ಕೃತಿ ಕಲಾಕೇಂದ್ರ ತೆರೆಯಲೂ ನಿಶ್ಚಯಿಸಲಾಗಿದೆ. ಈ ಯೋಜನೆಯ ರೂಪುರೇಷೆಗಳಿಗೆ ಅರಣ್ಯ ಇಲಾಖೆಯ ಅಂತಿಮ ಮಂಜೂರು ಸಿಗುತ್ತಲೇ ಕೆಲಸ ಆರಂಭಿಸಲಾಗುವುದು. ಅಂತಿಮ ಮಂಜೂರಿಗಾಗಿ ಯೋಜನೆಯ ಪ್ರತಿಯನ್ನು ಮನಪಾದ ವತಿಯಿಂದ ಅರಣ್ಯ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯ ಶಾಸಕ ಪ್ರತಾಪ್ ಸರ್‌ನಾಯ್ಕೆ ಮಾಹಿತಿ ನೀಡಿದ್ದಾರೆ.

ಠಾಣೆ ನಗರದಿಂದ 1,600 ಅಡಿ ಎತ್ತರದಲ್ಲಿರುವ ಯೆವೂರ್ ಬೆಟ್ಟಗಳಲ್ಲಿ ಪ್ರತಿದಿನ ನೂರಾರು ಜನ ಪಿಕ್ನಿಕ್‌ಗೆ ಬರುತ್ತಾರೆ. ಆದರೆ ಇದರಿಂದ ಮನಪಾ ಆಗಲಿ, ಅರಣ್ಯ ಇಲಾಖೆಗೆ ಆಗಲಿ ಯಾವುದೇ ಲಾಭ ಸಿಗುತ್ತಿಲ್ಲ. ಹೀಗಾಗಿ ಇದನ್ನು ಪ್ರವಾಸ ಸ್ಥಳವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಹಾಗೂ 8,962 ವರ್ಗಮೀಟರ್ ಪರಿಸರವನ್ನು ಪ್ರವಾಸ ಸ್ಥಳವಾಗಿ ವಿಕಸಿತಗೊಳಿಸಲಾಗುವುದು.

ಪನ್ವೇಲ್ ಮನಪಾದಿಂದ ಹೊರಗಿಟ್ಟ ಊರುಗಳ ಜನರಲ್ಲಿ ನಿರಾಶೆ

ಮಹಾರಾಷ್ಟ್ರ ಸರಕಾರವು ಘೋಷಿಸಿದ ಮುಂಬೈ ಸಮೀಪದ ಪನ್ವೇಲ್ ಮಹಾನಗರಪಾಲಿಕೆ ಕ್ಷೇತ್ರದಿಂದ ಸಿಡ್ಕೋದ ನವಿ ಮುಂಬೈ ಏರ್‌ಪೋರ್ಟ್ ಪ್ರಭಾವಿತ ಕ್ಷೇತ್ರದ 36 ಊರುಗಳನ್ನು ಪ್ರತ್ಯೇಕಗೊಳಿಸಿದ ಕಾರಣ ಈ ಊರಿನ ಗ್ರಾಮಸ್ಥರು ನಿರಾಶೆಗೊಂಡಿದ್ದಾರೆ. ರಾಜ್ಯ ಸರಕಾರವು ಸಿಡ್ಕೋದ ಒತ್ತಡಕ್ಕೆ ಮಣಿದು ಈ ನಿರ್ಣಯ ತಳೆದಿದೆ ಎಂದು ಈ ಊರುಗಳ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲು ಈ 36 ಊರುಗಳ ಜನರಲ್ಲಿ ವಿಚಾರ ವಿಮರ್ಶೆ ನಡೆಸದೆಯೇ ಪ್ರಸ್ತಾವಿತ ಪನ್ವೇಲ್ ಮನಪಾ ಕ್ಷೇತ್ರದಲ್ಲಿ ಇವನ್ನು ಸೇರಿಸಲಾಗಿತ್ತು. ನಂತರ ಇವರಿಗೆ ತಿಳಿಸದೆಯೇ ಮನಪಾ ಕ್ಷೇತ್ರದಿಂದ ಹೊರಗಿಡಲಾಯಿತು. ಸಮಯ ಈ 36 ಊರುಗಳಲ್ಲಿ ಯಾವುದೇ ಕಟ್ಟಡ ಕಟ್ಟಬೇಕಾದರೆ ಸಿಡ್ಕೋ ಅನೇಕ ಶರ್ತಗಳನ್ನು ವಿಧಿಸಿ ಕಟ್ಟಡ ಕಟ್ಟುವುದಕ್ಕೆ ನಿಷೇಧಿಸಿದೆ. ಇದರಿಂದ ಗ್ರಾಮೀಣ ಜನರಲ್ಲಿ ತೀವ್ರ ಬೇಸರ ಉಂಟಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top