500 ಅಡಿ ಕಂದಕಕ್ಕೆ ಉರುಳಿ ಬಿದ್ದ ಬಸ್: 6 ಸಾವು, 28 ಮಂದಿಗೆ ಗಾಯ
ಚೆನ್ನೈ, ಜೂ.14: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಂಡಾಲ ಎಂಬಲ್ಲಿ ಬಸ್ಸೊಂದು 500 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಆರು ಪ್ರಯಾಣಿಕರು ಸಾವನ್ನಪ್ಪಿ 28 ಮಂದಿ ಇತರರು ಗಾಯಗೊಂಡ ಘಟನೆ ನಡೆದಿದೆ.
ಘಾಟ್ ರಸ್ತೆಯಲ್ಲಿದ್ದ ಗುಂಡಿಯೊಂದನ್ನು ತಪ್ಪಿಸಲು ರಾಜ್ಯ ಸಾರಿಗೆ ನಿಗಮದ ಬಸ್ಸು ಚಾಲಕ ಯತ್ನಿಸಿದಾಗ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸು ಕೂನೂರ್ ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೀಲಗಿರಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ.
Next Story