ಏಳು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಪೌಷ್ಟಿಕಾಂಶ ನಿಗಾ ಸಾಫ್ಟ್ವೇರ್:ಡಬ್ಲ್ಯುಸಿಡಿ
ಹೊಸದಿಲ್ಲಿ,ಜೂ.25: ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕಾಂಶಗಳ ಮೇಲೆ ವಾಸ್ತವಿಕ ಸಮಯದ ನಿಗಾ ಇರಿಸಲು ಕಳೆದ ತಿಂಗಳು ಆರಂಭಿಸಲಾಗಿರುವ ನೂತನ ಸಾಫ್ಟ್ವೇರ್ನ್ನು ಪ್ರಸಕ್ತ ಏಳು ರಾಜ್ಯಗಳಲ್ಲಿಯ ಅಂಗನವಾಡಿ ಕೇಂದ್ರಗಳು ಬಳಸುತ್ತಿವೆ ಮತ್ತು 10 ಕೋ.ಮಕ್ಕಳಿಗೆ ಲಾಭವನ್ನೊದಗಿಸಲು ಶೀಘ್ರವೇ ದೇಶಾದ್ಯಂತ ವಿಸ್ತರಣೆಗೊಳ್ಳಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ(ಡಬ್ಲ್ಯುಸಿಡಿ) ಸಚಿವಾಲಯದ ಕಾರ್ಯದರ್ಶಿ ರಾಕೇಶ ಶ್ರೀವಾಸ್ತವ ಅವರು ಸೋಮವಾರ ಇಲ್ಲಿ ತಿಳಿಸಿದರು.
ಕಳೆದ ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಾಫ್ಟ್ವೇರ್ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಬಿಹಾರ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 57 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದೆ.
ಪ್ರತಿ ಗ್ರಾಮದಲ್ಲಿ ವಿತರಿಸಲಾಗುವ ಪೌಷ್ಟಿಕಾಂಶಗಳ ವಿವರಗಳನ್ನು ಪಡೆಯಲು ನೆರವಾಗುವ ಈ ಸಾಫ್ಟ್ವೇರ್ ಪೌಷ್ಟಿಕಾಂಶ ಕೊರತೆ ಸಮಸ್ಯೆಯನ್ನು ಖಾಯಂ ಆಗಿ ಬಗೆಹರಿಸುವ ಗುರಿ ಹೊಂದಿದೆ. ಈ ವ್ಯವಸ್ಥೆಯು ತಳಮಟ್ಟದಿಂದ ವಾಸ್ತವಿಕ ಸಮಯದ ವರದಿಗಳನ್ನು ಪಡೆಯುತ್ತದೆ.
2020ರ ವೇಳೆಗೆ ಹಂತಹಂತವಾಗಿ ದೇಶದ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 718 ಜಿಲ್ಲೆಗಳಲ್ಲಿ ಈ ಸಾಫ್ಟ್ವೇರ್ ಕಾರ್ಯಾಚರಿಸಲಿದೆ ಎಂದು ಶ್ರೀವಾಸ್ತವ ತಿಳಿಸಿದರು.