'ಒಂದು ದೇಶ ಒಂದು ಕಾರ್ಡ್'- ಏನಿದರ ವಿಶೇಷ?

ಅಹ್ಮದಾಬಾದ್, ಮಾ.5: ದೇಶೀಯವಾಗಿ ಅಭಿವೃದ್ಧಿಪಡಿಸಿದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್(ಎನ್ಸಿಎಂಸಿ)ಯನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು. 'ವನ್ ನೇಷನ್ ವನ್ ಕಾರ್ಡ್' ಎಂದು ಬಿಂಬಿಸಲಾಗಿರುವ ಈ ಕಾರ್ಡ್ ಮೂಲಕ ಜನತೆ ಮೆಟ್ರೊ ಸೇವೆಯಿಂದ ಹಿಡಿದು ಟೋಲ್ ತೆರಿಗೆಯ ವರೆಗೆ ಹಲವು ಬಗೆಯ ಸಂಚಾರ ಶುಲ್ಕಗಳನ್ನು ಪಾವತಿಸಬಹುದಾಗಿದೆ.
ಕಾರ್ಡ್ದಾರರು ಈ ಕಾರ್ಡ್ ಮೂಲಕ ತಮ್ಮ ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್ ಶುಲ್ಕ, ಚಿಲ್ಲರೆ ಶಾಪಿಂಗ್ಗೆ ಪಾವತಿ ಮಾಡಬಹುದಾಗಿದೆ. ಅಂತೆಯೇ ಅಗತ್ಯಬಿದ್ದಲ್ಲಿ ನಗದು ಪಡೆಯಲೂ ಇದನ್ನು ಬಳಸಬಹುದಾಗಿದೆ.
ಅಹ್ಮದಾಬಾದ್ ಮೆಟ್ರೊ ರೈಲು ಸೇವೆಯ ಮೊದಲ ಹಂತವನ್ನು ಉದ್ಘಾಟಿಸುವ ವೇಳೆ ಮೋದಿ ಈ ವಿನೂತನ ಕಾರ್ಡ್ ಬಿಡುಗಡೆ ಮಾಡಿದರು. "ಈ ಕಾರ್ಡ್ ರೂಪೇ ಕಾರ್ಡ್ನಡಿ ಕಾರ್ಯನಿರ್ವಹಿಸುತ್ತದೆ ಹಾಗೂ ಎಲ್ಲ ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಲಿದೆ. ಹಲವು ಬಾರಿ ಮೆಟ್ರೊ, ಬಸ್ ಅಥವಾ ರೈಲು ಪ್ರಯಾಣದ ವೇಳೆ, ಪಾರ್ಕಿಂಗ್ ಶುಲ್ಕ ಹಾಗೂ ಟೋಲ್ ನೀಡಲು ನಗದು ರೂಪದಲ್ಲಿ ನೀಡಲು ಚಿಲ್ಲರೆ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಸ್ವಯಂಚಾಲಿತ ದರ ಸಂಗ್ರಹ ವ್ಯವಸ್ಥೆಯನ್ನು ಆರಂಭಿಸಿದ್ದೇವೆ" ಎಂದು ಮೋದಿ ವಿವರಿಸಿದರು.
ಹಿಂದೆ ಈ ಕಾರ್ಡ್ಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ವ್ಯವಸ್ಥೆಯನ್ನು ವಿಭಿನ್ನ ಕಂಪೆನಿಗಳು ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಒಂದು ನಗರದ ಕಾರ್ಡ್ ಮತ್ತೊಂದು ನಗರದಲ್ಲಿ ಉಪಯೋಗಕ್ಕೆ ಬರುತ್ತಿರಲಿಲ್ಲ. ಆದ್ದರಿಂದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಬ್ಯಾಂಕ್ಗಳಿಗೆ ಈ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಒಂದು ದೇಶ ಒಂದು ಕಾಡ್ ಎಂಬ ಕನಸು ನನಸಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.
ಇದೀಗ ರೂಪೇ ಕಾರ್ಡ್ ಮೂಲಕ ದೇಶದ ಯಾವುದೇ ಮೆಟ್ರೊ ಪ್ರಯಾಣ ಶುಲ್ಕವನ್ನೂ ಪಾವತಿಸಬಹುದಾಗಿದೆ. ಸರಳವಾಗಿ ಹೇಳಬೇಕೆಂದರೆ ರೂಪೇ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ನಲ್ಲಿ ವಿಲೀನಗೊಳಿಸಿದ್ದೇವೆ ಎಂದು ಹೇಳಿದರು.







