ಮಮತಾ ಹಾಗು ನವೀನ್ ಪಾಟ್ನಾಯಕ್ ರನ್ನು ಹೊಗಳಿದ ಬಿಜೆಪಿ ವಕ್ತಾರೆ!
ಸರಣಿ ಟ್ವೀಟ್ ಮೂಲಕ ಸ್ವಪಕ್ಷಕ್ಕೆ ಚುಚ್ಚಿದ ಹಿರಿಯ ನಾಯಕಿ
ಹೊಸದಿಲ್ಲಿ, ಎ.4: ಪ್ರಮುಖ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಪ್ರಮುಖ ವಕ್ತಾರೆ ಹಾಗು ನಾಯಕಿ ಶೈನಾ ಎನ್. ಸಿ. ಅವರು ಪಕ್ಷದ ಬದ್ಧ ವೈರಿಗಳೆಂದೇ ಪರಿಗಣಿಸಲಾಗಿರುವ ತೃಣಮೂಲ ಕಾಂಗ್ರೆಸ್ ಹಾಗು ಬಿಜು ಜನತಾ ದಳವನ್ನು ಶ್ಲಾಘಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 41% ಹಾಗು ನವೀನ್ ಪಾಟ್ನಾಯಕ್ ಅವರ ಬಿಜು ಜನತಾ ದಳ 33% ಟಿಕೆಟ್ ಮಹಿಳೆಯರಿಗೆ ನೀಡಿರುವುದನ್ನು ಬಿಟ್ಟರೆ ಉಳಿದ ಎಲ್ಲ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಮಾತಾಡುವುದಕ್ಕೆ ಸೀಮಿತವಾಗಿವೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ ಮಹಿಳೆಯರಿಗೆ ಸಾಕಷ್ಟು ಟಿಕೆಟ್ ನೀಡದ ಟೀಕೆಯನ್ನು ಶೈನಾ ಅವರ ಪಕ್ಷ ಬಿಜೆಪಿ ಕೂಡ ಎದುರಿಸುತ್ತಿದ್ದು, ಅವರು ತಮ್ಮ ಪಕ್ಷಕ್ಕೂ ಟ್ವೀಟ್ ಗಳ ಮೂಲಕ ಕುಟುಕಿದ್ದಾರೆ.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯ ಪ್ರಬಲ ಪ್ರತಿಪಾದಕಿಯಾಗಿರುವ ಶೈನಾ ಬಿಜೆಪಿಯ ಅತ್ಯಂತ ಖ್ಯಾತ ವಕ್ತಾರರಲ್ಲಿ ಒಬ್ಬರು. ಈ ಬಾರಿ ಅವರು ದಕ್ಷಿಣ ಮುಂಬೈಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ ಶಿವಸೇನೆ ಮತ್ತು ಬಿಜೆಪಿ ತಮ್ಮ ಮೈತ್ರಿಗೆ ಮತ್ತೆ ತೇಪೆ ಹಚ್ಚಿಕೊಂಡಿದ್ದರಿಂದ ಆ ಕ್ಷೇತ್ರದ ಟಿಕೆಟ್ ಅಲ್ಲಿನ ಹಾಲಿ ಶಿವಸೇನಾ ಸಂಸದ ಅರವಿಂದ್ ಸಾವಂತ್ ಅವರ ಪಾಲಾಗಿದೆ.